ಅಕ್ಷಯ ತೃತೀಯ ಹಿಂದೂ ಮತ್ತು ಜೈನ ಧರ್ಮೀಯರಿಗೆ ಅತ್ಯಂತ ಪವಿತ್ರ ದಿನವಾಗಿದೆ. ವೈಶಾಖ ಮಾಸದ ಶುಕ್ಲಪಕ್ಷದ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಮೂರೂವರೆ ಮುಹೂರ್ತಗಳಲ್ಲಿ ಇದನ್ನು ಒಂದು ಶುಭ ಮುಹೂರ್ತವೆಂದು ಹೇಳಲಾಗುತ್ತದೆ.
ಮೊದಲನೆಯ ಶುಭ ಮುಹೂರ್ತವೆಂದರೆ ಚೈತ್ರ ಮಾಸದ ಯುಗಾದಿ, ಎರಡನೆಯ ಶುಭ ಮುಹೂರ್ತವೆಂದರೆ ಅಕ್ಷಯ ತೃತೀಯ ಮತ್ತು ಮೂರನೆಯ ಶುಭ ಮುಹೂರ್ತವೆಂದರೆ ದಸರಾ. ಅರ್ಧ ಮುಹೂರ್ತವೆಂದರೆ ದೀಪಾವಳಿಯ ಪಾಡ್ಯವಾಗಿದೆ. ಇಲ್ಲಿ ಮುಹೂರ್ತವೆಂದರೆ ಉತ್ತಮ ಫಲಪ್ರಾಪ್ತಿಗಾಗಿ ಶುಭ ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಅಂತ್ಯವಿಲ್ಲದ ಸಮೃದ್ಧಿಯ ಮೂರನೇ ದಿನದಂದು ಕಾಲವಿವೇಕ ಗ್ರಂಥದಲ್ಲಿ ಉಪವಾಸ ಆಚರಿಸಬೇಕೆಂದು ಹೇಳಲಾಗಿದೆ. ಜೈನ ಧರ್ಮವು ಅಂದು ಉಪವಾಸ ವ್ರತವನ್ನು ಮಾಡಬೇಕು ಎಂದು ಹೇಳುತ್ತದೆ. ಈ ದಿನಕ್ಕೆ ‘ಆಖಾ ತೀಜ್’ ಎಂದು ಹೇಳುತ್ತಾರೆ.
ಈ ದಿನ ಅನ್ನಪೂರ್ಣ ಜಯಂತಿ, ನರ-ನಾರಾಯಣ ಜಯಂತಿ, ಜೋಡದೇವ ಜಯಂತಿ, ಪರಶುರಾಮ ಜಯಂತಿ, ಬಸವೇಶ್ವರ ಜಯಂತಿ ಮತ್ತು ಹಯಗ್ರೀವ ಜಯಂತಿ ಆಚರಿಸಲಾಗುತ್ತದೆ. ಪುರಾಣದ ಪ್ರಕಾರ ಮಹಾಭಾರತ ಗ್ರಂಥದ ರಚನೆಯನ್ನು ಈ ದಿನ ವ್ಯಾಸರು ಪ್ರಾರಂಭ ಮಾಡಿದರು ಮತ್ತು ಗಣಪತಿ ಅದರ ಲೇಖಕನಾಗಿ ಕಾರ್ಯನಿರ್ವಹಿಸಿದನು ಎಂದು ಹೇಳಲಾಗುತ್ತದೆ.
ಈ ಹಬ್ಬದಂದು ದೂರ್ವಾಸ ಋಷಿ ಸೇರಿದಂತೆ ಅನೇಕ ಋಷಿಗಳ ಭೇಟಿಯ ಸಮಯದಲ್ಲಿ ಕೃಷ್ಣನು ದ್ರೌಪದಿಗೆ ಅಕ್ಷಯ ಪಾತ್ರೆಯನ್ನು ನೀಡಿದನು ಎಂದು ಉಲ್ಲೇಖವಿದೆ. ವನವಾಸದ ಸಮಯದಲ್ಲಿ ಪಾಂಡವರು ಕಾಡಿನಲ್ಲಿ ಆಹಾರದ ಕೊರತೆಯಿಂದ ಹಸಿದಿದ್ದರು ಮತ್ತು ದ್ರೌಪದಿ ತಮ್ಮ ಅತಿಥಿಗಳಿಗೆ ಸಾಂಪ್ರದಾಯಿಕ ಅತಿಥ್ಯವನ್ನು ನೀಡಲು ಸಾಧ್ಯವಾಗದ ಕಾರಣದಿಂದ ಚಿಂತಿತಳಾದಾಗ ಕೃಷ್ಣನು ಅಕ್ಷಯ ಪಾತ್ರೆಯನ್ನು ನೀಡಿದನು ಎಂಬ ದಂತಕಥೆಯಿದೆ.
ಈ ದಿನದಂದು ಉತ್ತರಾಖಂಡದಲ್ಲಿರುವ ಪ್ರಸಿದ್ಧ ಬದರಿ ನಾರಾಯಣ ದೇವಾಲಯದ ಮುಚ್ಚಿದ ಬಾಗಿಲನ್ನು ತೆರೆಯಲಾಗುತ್ತದೆ. ದೀಪಾವಳಿಯ ಭಾವುಬಿಜ ದಿನದಂದು ಈ ಬಾಗಿಲನ್ನು ಮುಚ್ಚಲಾಗಿತ್ತದೆ. ಈ ದಿನ ನರ-ನಾರಾಯಣರೆಂಬ ಇಬ್ಬರು ದೇವತೆಗಳು ಅವತರಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಪರಶುರಾಮನ ಅವತರಣೆಯೂ ಈ ದಿನವೇ ಆಗಿದೆ ಎಂದು ಅವನನ್ನು ಪೂಜೆ ಮಾಡುತ್ತಾರೆ. ವೃಂದಾವನದ ಶ್ರೀ ಬಂಕೆಬಿಹಾರಿ ದೇವಸ್ಥಾನದಲ್ಲಿ ಶ್ರೀ ವಿಗ್ರಹದ ಚರಣದರ್ಶನವು ಈ ಸಮಯದಲ್ಲಿ ಮಾತ್ರ ಇರುತ್ತದೆ. ಉಳಿದ ಇಡೀ ವರ್ಷ ವಿಗ್ರಹವನ್ನು ವಸ್ತ್ರಗಳಿಂದ ಮುಚ್ಚಲಾಗುತ್ತದೆ. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡುವವರು ಪಾವನರಾಗುತ್ತಾರೆ ಎಂದು ನಂಬಿಕೆಯಿದೆ.
ಅಕ್ಷಯವೆಂದರೆ ಎಂದಿಗೂ ನಾಶವಾಗದೇ ಇರುವುದು. ಈ ದಿನ ಮಾಡುವ ಜಪ, ತಪ, ದಾನ, ಜ್ಞಾನಗಳು ಅಕ್ಷಯ ಫಲವನ್ನು ನೀಡುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಭವಿಷ್ಯ ಪುರಾಣ, ಮತ್ಸ್ಯ ಪುರಾಣ, ಪದ್ಮ ಪುರಾಣ ವಿಷ್ಣು ಪುರಾಣ, ಸ್ಕಂದ ಪುರಾಣದಲ್ಲಿ ಅಕ್ಷಯ ತೃತೀಯದ ಬಗ್ಗೆ ಬರೆಯಲಾಗಿದೆ. ಈ ದಿನ ದೇವತೆಗಳು ಮತ್ತು ಪಿತೃಗಳ ಪೂಜೆ ಮಾಡುತ್ತಾರೆ. ಈ ದಿನದಂದು ಹಿಂದೂಗಳು ಚಿನ್ನ ಖರೀದಿಸುವುದಕ್ಕೆ ಪ್ರಾಶಸ್ತ್ಯ ನೀಡಿದರೆ, ಜೈನರು ಉಪವಾಸ ವ್ರತಗಳನ್ನು ಕೈಗೊಳ್ಳುತ್ತಾರೆ. ಅಕ್ಷಯ ಎಂದರೆ ಎಂದಿಗೂ ಬರಿದಾಗದೇ ಇರುವುದು. ಆದ್ದರಿಂದ ಮಾಡುವ ದಾನ-ಧರ್ಮಗಳು ಕ್ಷಯವಾಗುವುದಿಲ್ಲ ಅಂದರೆ ಕಡಿಮೆಯಾಗುವುದಿಲ್ಲ. ಅಂದು ಹೊಸ ಉದ್ಯಮ, ಚಿನ್ನ ಖರೀದಿ, ಆಸ್ತಿ ಖರೀದಿಯಂತಹ ದುಬಾರಿ ಹೂಡಿಕೆಗಳನ್ನು ಮಾಡಲಾಗುತ್ತದೆ. ಯಾವುದೇ ಹೊಸ ಆರಂಭಕ್ಕೆ ಈ ದಿನ ಸೂಕ್ತ ಎನ್ನಲಾಗುತ್ತದೆ.
ಜೈನ ಧರ್ಮದ ಮೊದಲ ತೀರ್ಥಂಕರರಾದ ರಿಷಭದೇವರವರು ಕಬ್ಬಿನ ರಸವನ್ನು ಸೇವಿಸುವ ಮೂಲಕ ತಮ್ಮ ಒಂದು ವರ್ಷದ ಸನ್ಯಾಸತ್ವವನ್ನು ಕೊನೆಗೊಳಿಸುವುದನ್ನು ಅಕ್ಷಯ ತೃತೀಯ ದಿನವು ಸ್ಮರಿಸುತ್ತದೆ.
ಅಕ್ಷಯ ತೃತೀಯ ದಿನದಂದು ಯಾವ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು? ಎಂಬುದರ ಬಗ್ಗೆ ಭಕ್ತರ ನಂಬಿಕೆ ಈ ರೀತಿ ಇದೆ.
- ಬೆಳಿಗ್ಗೆ ಹರಿಯುವ ನೀರಿನಲ್ಲಿ ಅಥವಾ ಪವಿತ್ರ ನದಿಗಳಾದ ಗಂಗಾ, ಯಮುನಾ ನದಿಗಳ ನೀರಿನಲ್ಲಿ ಸ್ನಾನ ಮಾಡಬೇಕು ಅಥವಾ ಅವುಗಳನ್ನು ಆಹ್ವಾನಿಸಿ ಸ್ನಾನ ಮಾಡಬೇಕು.
- ಶ್ರೀ ವಿಷ್ಣುವಿನ ತತ್ತ್ವವನ್ನು ಆಕರ್ಷಿಸುವ ಸುಂದರ ರಂಗೋಲಿಗಳನ್ನು ಹಾಕಬೇಕು.
- ಶ್ರೀ ವಿಷ್ಣು ಮತ್ತು ಲಕ್ಷ್ಮಿಯವರನ್ನು ಭಕ್ತಿಯಿಂದ ಪೂಜಿಸಬೇಕು. ಧ್ಯಾನ, ಯಜ್ಞ ಮತ್ತು ಪೂಜೆಯನ್ನು ಮಂಗಳಕರವೆಂದು ಪರಿಗಣಿಸಬೇಕು.
- ಮರಣ ಹೊಂದಿದ ಪಿತೃಗಳ ಸ್ಮರಣೆಯ ದಿನ ಆಗಿರುವುದರಿಂದ ಅಂದು ತಿಲತರ್ಪಣ ಮಾಡಬೇಕು. ದೇವತೆಗಳಿಂದ ಅನೇಕ ಶಕ್ತಿ ಪಡೆಯಲು ಬಿಳಿ ಮತ್ತು ಪಿತೃರಿಗೆ ಕಪ್ಪು ಎಳ್ಳನ್ನು ಅರ್ಪಿಸಲಾಗುತ್ತದೆ.
ಹೀಗೆ ಅಕ್ಷಯ ತೃತೀಯದ ಬಗ್ಗೆ ಹೇಳುವುದು ಬಹಳಷ್ಟಿದೆ. ಆದರೆ ಆಧ್ಯಾತ್ಮಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಅಕ್ಷಯವೆಂದರೆ, ಅವಿನಾಶಿ, ಅಜರ, ಅಮರ, ನಶ್ವರ, ಶಾಶ್ವತ, ಸರ್ವಕಾಲಿನ ವಾದ್ದದು ಎಂಬರ್ಥ.
ವಾಸ್ತಿವಿಕವಾಗಿ ನೋಡುವುದಾದರೆ. ಆತ್ಮ, ಪರಮಾತ್ಮ ಇವೆರಡು ಚೈತನ್ಯ ಶಕ್ತಿಗಳು, ಅವಿನಾಶಿ, ಅಮರ, ಅವ್ಯಕ್ತ, ಅಜರ, ನಶ್ವರವಾಗಿವೆ. ನಾವೆಲ್ಲರೂ ಅತಿಸೂಕ್ಷ್ಮವಾದ ಮನಸ್ಸು, ಬುದ್ಧಿ, ಸಂಸ್ಕಾರಗಳಿಂದ ಕೂಡಿರುವ ಆತ್ಮಜ್ಯೋತಿಗಳು. ಮನಸ್ಸು ಎಂದರೆ ಆಲೋಚನೆ ಮಾಡುವ ಶಕ್ತಿಯಾಗಿದೆ. ಬುದ್ಧಿ ಎಂದರೆ ನಿರ್ಣಯ ಮಾಡುವ ಶಕ್ತಿ. ಸಂಸ್ಕಾರ ಎಂದರೆ ಕರ್ಮದ ಫಲದ ದಾಖಲಾತಿಯಾಗಿದೆ. ಆತ್ಮನಿಗೆ ತನ್ನ ಕರ್ಮದ ಅನುಗುಣವಾಗಿ ಪಾಪಾತ್ಮ, ಪುಣ್ಯಾತ್ಮ, ಮಹಾತ್ಮ, ದೇವಾತ್ಮನೆಂದು ಹೇಳುತ್ತಾರೆ. ಆತ್ಮವು ಮುಖ್ಯವಾಗಿ ಶಾಂತಿ, ಪವಿತ್ರತೆ, ಆನಂದ, ದಯಾ, ಸುಖ, ಪ್ರೇಮ ಇತರೆ ದಿವ್ಯಗುಣಗಳಿಂದ ಕೂಡಿದೆ. ಪರಂಜ್ಯೋತಿ ಸ್ವರೂಪ ಪರಮಾತ್ಮನ ಜೊತೆಗೆ ಸಂಬಂಧವನ್ನು ಜೋಡಿಸುವುದರ ಮೂಲಕ ನಾವೆಲ್ಲರೂ ಈ ಗುಣಗಳನ್ನು ಅನುಭವ ಮಾಡಬಹುದು. ಭಗವಂತ ಕಲಿಸುವ ಸಹಜ ರಾಜಯೋಗದಿಂದ ಅನೇಕ ಆಧ್ಯಾತ್ಮ್ಮಿಕ ಶಕ್ತಿಗಳು ದೊರೆಯುತ್ತವೆ. ಅದರಲ್ಲಿ ಮುಖ್ಯವಾಗಿ 8 ಶಕ್ತಿಗಳಿವೆ – ವಿಸ್ತಾರವನ್ನು ಸಂಕೀರ್ಣಗೊಳಿಸುವ ಶಕ್ತಿ, ಅಳವಡಿಸಿಕೊಳ್ಳುವ ಶಕ್ತಿ, ಸಹನ ಶಕ್ತಿ, ಸಮಾವೇಶ ಮಾಡಿಕೊಳ್ಳುವ ಶಕ್ತಿ, ಗುರುತಿಸುವ ಶಕ್ತಿ, ನಿರ್ಣಯ ಶಕ್ತಿ, ಎದುರಿಸುವ ಶಕ್ತಿ, ಸಹಯೋಗ ಶಕ್ತಿ.
ಇಲ್ಲಿ ಭಗವಂತನ ಸಂಪೂರ್ಣ ಪರಿಚಯ ಮಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಅವನ ಹೆಸರು ಸದಾಶಿವ. ಅವನು ಕಲ್ಯಾಣಕಾರಿ, ಮಂಗಳಕಾರಿ, ಅಜನ್ಮ, ಅಭೋಕ್ತ, ಅವ್ಯಕ್ತ, ಅನಾದಿ, ಅವಿನಾಶಿ, ಅಮರನಾಗಿದ್ದಾನೆ. ಅವನು ಅತಿಸೂಕ್ಷ್ಮ, ಜ್ಯೋತಿರ್ಬಿಂದು, ಸರ್ವರಿಗೂ ತಂದೆ, ತಾಯಿ, ಬಂಧು-ಬಳಗ, ಸತ್ಯಗುರು, ಶಿಕ್ಷಕ, ಸಖ ಆಗಿದ್ದಾನೆ. ಈ ಪತಿತ ಪ್ರಪಂಚವನ್ನು ಮತ್ತೊಮ್ಮೆ ಪಾವನ ಮಾಡಲು ಸ್ವಯಂ ಪರಮಾತ್ಮನು ಈ ಭೂಮಿಯ ಮೇಲೆ ಅವತರಿಸಿ ಪ್ರಜಾಪಿತ ಬ್ರಹ್ಮಾರವರ ತನುವಿನ ಮೂಲಕ ಗುಪ್ತ ರೀತಿಯಿಂದ ತನ್ನ ಅಲೌಕಿಕ ಕಾರ್ಯವನ್ನು ಮಾಡುತ್ತಿದ್ದಾನೆ. ಪರಮಾತ್ಮನನ್ನು ನಾವು ಈಶ್ವರ, ಭಗವಂತ, ಅಲ್ಲಾಹ, ಗಾಡ್ ಇತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ಅವನು ವಿಶ್ವದ ಸರ್ವ ಆತ್ಮರ ಪರಮಪಿತನಾಗಿದ್ದಾನೆ. ಅವನು ಜ್ಞಾನ, ಪವಿತ್ರತೆ, ಪ್ರೇಮ, ಆನಂದ ಮತ್ತು ಶಕ್ತಿಗಳ ಸಾಗರವಾಗಿದ್ದಾನೆ; ಜನ್ಮ-ಮರಣಗಳ ಚಕ್ರದಿಂದ ದೂರವಿದ್ದಾನೆ.
ಈ ಅಕ್ಷಯ ತೃತೀಯದ ಶುಭಗಳಿಗೆಯಲ್ಲಿ ನಾವೆಲ್ಲರೂ ಮತ್ತೆ ಸರ್ವ ಗುಣಗಳೆಂಬ ಸ್ವರ್ಣದಿಂದ ಶ್ರೀಮಂತರಾಗೋಣ. ಗುಣ-ಶಕ್ತಿಗಳ ದಾನ ಪುಣ್ಯ ಮಾಡೋಣ. ಮನಸ್ಸು-ಬುದ್ಧಿಗಳನ್ನು ಜ್ಞಾನಗಂಗೆಯಲ್ಲಿ ಮಿಯ್ಯುಸುತ್ತಾ ಪಾವನ-ಪವಿತ್ರರಾಗೋಣ. ಮತ್ತೆ ಭಾರತದಲ್ಲಿ ಬರುವ ಸ್ವರ್ಗದಲ್ಲಿ ಲಕ್ಷ್ಮಿ-ನಾರಾಯಣರ ಸಮಾನ ದೈವಿ ಪದವಿಯನ್ನು ಪಡೆಯೋಣ.
-ವಿಶ್ವಾಸ. ಸೋಹೋನಿ. ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
9483937106.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ