ಪ್ರಗತಿವಾಹಿನಿ ಸುದ್ದಿ: ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಆಗಸ್ಟ್ 17 ರಂದು 24 ಗಂಟೆ ದೇಶಾದ್ಯಂತ ಸರ್ಕಾರಿ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಎಲ್ಲಾ ಒಪಿಡಿಗಳು ಮತ್ತು ಶಸ್ತ್ರಚಿಕಿತ್ಸೆ ವಿಭಾಗಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೋಲ್ಕತ್ತಾದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ವಿರುದ್ಧ ರಾಷ್ಟ್ರವ್ಯಾಪಿ ಸ್ವಯಂಪ್ರೇರಿತ ಆಕ್ರೋಶ ವ್ಯಕ್ತವಾಗಿದೆ. ಇದಾದ ಬಳಿಕ ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಭಟನಾನಿರತ ಸ್ಥಳೀಯರು ಮತ್ತು ಕಿರಿಯ ವೈದ್ಯರ ಮೇಲೆ ಮಧ್ಯರಾತ್ರಿ ಗುಂಪೊಂದು ದಾಳಿ ನಡೆಸಿದೆ. ಈ ಬೆಳವಣಿಗೆಯ ಬಳಿಕ ಐಎಂಎ ರಾಜ್ಯ ಘಟಕಗಳೊಂದಿಗೆ ತುರ್ತು ಸಭೆ ನಡೆಸಿ ಪ್ರತಿಭಟನೆಯ ನಿರ್ಧಾರ ಕೈಗೊಂಡಿದೆ. ಒಪಿಡಿಗಳು ಬಂದ್ ಆದರೂ ಅಪಘಾತ ಮತ್ತು ತುರ್ತು ಸೇವೆ ವ್ಯತ್ಯಯವಿಲ್ಲ ಎಂದು ಐಎಂಎ ಹೇಳಿದೆ.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಆರ್.ವಿ ಅಶೋಕನ್ ಮಾತನಾಡಿ, ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಶನಿವಾರ ಬೆಳಿಗ್ಗೆ 6 ರಿಂದ ಭಾನುವಾರ ಬೆಳಿಗ್ಗೆ 6 ರವರೆಗೆ ಒಪಿಡಿ ಮತ್ತು ಶಸ್ತ್ರಚಿಕಿತ್ಸೆ ವಿಭಾಗಗಳಲ್ಲಿ ಸೇವೆ ಸಲ್ಲಿಸದಂತೆ ಮನವಿ ಮಾಡಿದ್ದೇವೆ. ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸಲು ಮತ್ತು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಕೇಂದ್ರೀಯ ರಕ್ಷಣಾ ಕಾಯಿದೆಯನ್ನು ತರಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ