ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಂತರರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದಂತೆ ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಂತರ ರಾಜ್ಯ ಜಲವಿವಾದಗಳ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಚಿವರ, ಕಾನೂನು ತಜ್ಞ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕಾನೂನು ವಿಭಾಗದ ಎಲ್ಲಾ ಹಿರಿಯ ನ್ಯಾಯವಾದಿಗಳೊಂದಿಗೆ ಇಂದು ವೀಡಿಯೋ ಸಂವಾದ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಕೃಷ್ಣಾ, ಕಾವೇರಿ ಜಲಾನಯನ ಪ್ರದೇಶಗಳು ಮತ್ತು ಮಹಾದಾಯಿ ಯೋಜನೆಗಳ ಬಗ್ಗೆ ಹಾಗೂ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿರುವ ಪ್ರಕರಣಗಳ ಬಗ್ಗೆ ಚರ್ಚೆಯಾಗಿದೆ. ನ್ಯಾಯವಾದಿಗಳೂ ಸಹ ಹಲವಾರು ನ್ಯಾಯಾಲಯಗಳ ಪ್ರಕರಣಗಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಈ ಎಲ್ಲಾ ಜಲವಿವಾದಗಳ ಬಗ್ಗೆ ಜನವರಿ ಅಂತ್ಯದಲ್ಲಿ ಮತ್ತೊಂದು ವೀಡಿಯೋ ಸಂವಾದ ನಡೆಯಲಿದೆ ಎಂದರು.
ನ್ಯಾಯವಾದಿಗಳು, ಸಚಿವರು, ಕಾನೂನು ಸಚಿವರನ್ನೂ ಕರೆದು, ಕಾನೂನಿನ ಹೋರಾಟ ಎಲ್ಲಿಯವರೆಗೂ ಬಂದಿದೆ, ನಾವೆಲ್ಲರೂ ಮುಂದೆ ಯಾವ ನಿಲುವನ್ನು ತೆಗೆದುಕೊಂಡು ರಾಜ್ಯದ ಹಿತದೃಷ್ಟಿಯಿಂದ ಯೋಜನೆಗಳನ್ನು ಸಾಕಾರಗೊಳಿಸಲು ಯಾವ ರೀತಿ ಮುಂದುವರೆಯಬೇಕೆಂದು ಚರ್ಚಿಸಲಾಗುವುದು. ಕೆಲವು ಪ್ರಕರಣಗಳು ಪ್ರಮುಖ ಘಟ್ಟದಲ್ಲಿರುವುದರಿಂದ ಮತ್ತೊಮ್ಮೆ ಕಾನೂನು ಪರಿಣಿತರು ಹಾಗೂ ವಿರೋಧ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ಮಾಡಿ ನಮ್ಮ ನಿಲುವಿನ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಮೇಕೆದಾಟು ಯೋಜನೆಗೆ ಪರ್ಯಾಯವಾಗಿ ತಮಿಳುನಾಡು ಹೊಗೆನಕಲ್ 2 ನೇ ಯೋಜನೆ ಜಾರಿಗೆ ತರುತ್ತಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸರ್ಕಾರವಾಗಿ ಇಂತಹ ಹಲವಾರು ಸವಾಲುಗಳನ್ನು ಹಿಂದೆ ಕೂಡ ಎದುರಿಸಲಾಗಿದ್ದು, ಹೊಗೆನಕಲ್ 2ನೇ ಯೋಜನೆಯಾಗಲಿ ಅಥವಾ ನದಿ ಜೋಡಣೆಯ ಯೋಜನೆಯಾಗಲಿ ಈಗಾಗಲೇ ಕರ್ನಾಟಕ ಸರ್ವೋಚ್ಛ ನ್ಯಾಯಾಲಯದಲ್ಲಿ ವಿರೋಧ ವ್ಯಕ್ತಪಡಿಸಿ ದಾವೆ ಹೂಡಲಾಗಿದೆ. ಹೋಗೆನಕಲ್ ಯೋಜನೆಗೂ ಕೇಂದ್ರ ಜಲ ಆಯೋಗವು ಇದಕ್ಕೆ ಒಪ್ಪಿಗೆ ನೀಡಬಾರದು ಎಂದು ಮನವಿ ಮಾಡಲಾಗಿದೆ ಹಾಗೂ ಕಾನೂನಾತ್ಮಕ ಹೋರಾಟವನ್ನು ಪ್ರಬಲವಾಗಿ ಮಾಡಲಾಗುತ್ತಿದೆ ಎಂದರು.
ಕೋವಿಡ್ ಉಲ್ಬಣದ ನಡುವೆಯೇ ರಾಜ್ಯಕ್ಕೆ ಮತ್ತೆ ವಕ್ಕರಿಸಿತು ಮಾರಣಾಂತಿಕ ಖಾಯಿಲೆ KFD
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ