ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆ ಇಂದು ಸಂಜೆ 4ಕ್ಕೆ ಇಲ್ಲಿನ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ ನಲ್ಲಿ ನಡೆಯಲಿದ್ದು, ಸಕಲ ಸಿದ್ಧತೆಗಳು ಮುಂದುವರಿದಿವೆ.
ಇದೇ ವೇಳೆ ಸ್ಪಂದನಾ ಅವರ ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮಲ್ಲೇಶ್ವರಂನ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಜನ ಅಭಿಮಾನಿಗಳು, ಗಣ್ಯರು ಅಂತಿಮ ದರ್ಶನ ಪಡೆದು ಸ್ಪಂದನಾ ಅಕಾಲಿಕ ಸಾವಿಗೆ ಕಣ್ಣೀರಿಡುತ್ತಿದ್ದಾರೆ.
ರಾಜ್ಕುಮಾರ್ ಕುಟುಂಬಸ್ಥರು, ನಟಿ ಸುಧಾರಾಣಿ ಕುಟುಂಬ, ಗಾಯಕ ವಿಜಯ ಪ್ರಕಾಶ್, ನಟ ಕೋಮಲ್, ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್, ವಿಕ್ರಮ್ ಸೂರಿ, ಹಿರಿಯ ನಟ, ನಿರ್ಮಾಪಕ ಅರವಿಂದ್ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಸೇರಿದಂತೆ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು, ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ಶಾಸಕ ಸುನೀಲ್ ಕುಮಾರ್, ಹರತಾಳು ಹಾಲಪ್ಪ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯವರೆಗೂ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದರಿಂದ ಜನ ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದು ಸ್ಪಂದನಾ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಇನ್ನೊಂದೆಡೆ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ಮುಂದುವರಿದಿವೆ. ಬಿಬಿಎಂಪಿ ಅಧಿಕಾರಿಗಳು ಅಂತ್ಯಸಂಸ್ಕಾರದ ಸಕಲ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. 15ಕ್ಕೂ ಹೆಚ್ಚು ಪೌರ ಕಾರ್ಮಿಕರು ಅಂತ್ಯಸಂಸ್ಕಾರದ ಭೂಮಿ ಸ್ವಚ್ಛಗೊಳಿಸಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದು ಶವ ದಹನದ ಯಂತ್ರ ಸಜ್ಜುಗೊಳಿಸಲಾಗುತ್ತಿದೆ.
ಸ್ಪಂದನಾ ಅವರು ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಆಗಸ್ಟ್ 6ರಂದು ಹೃದಯಾಘಾತದಿಂದ ಮೃತಪಟ್ಟಿದ್ದು, ಬ್ಯಾಂಕಾಕ್ ನಲ್ಲೇ ಅವರ ಮರಣೋತ್ತರ ಪರೀಕ್ಷೆ ನಡೆಸಿ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ