*ಮತದಾರರ ಹೆಸರು ಡಿಲೀಟ್ಗೆ ನಕಲಿ ದಾಖಲೆ ಆರೋಪ: ಡಾ. ರವಿ ಪಾಟೀಲ್ ಸೇರಿ 20ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್ಐಆರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ವೀರಭದ್ರನಗರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 198 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ನಕಲಿ ದಾಖಲೆ ಹಾಗೂ ಸುಳ್ಳು ಮಾಹಿತಿ ನೀಡಿ ಫಾರ್ಮ್ ನಂ.7 ಸಲ್ಲಿಸಲು ಯತ್ನಿಸಿದ ಆರೋಪದಡಿ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಸೇರಿದಂತೆ 20ರಿಂದ 25 ಜನರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಾರ್ಡ್ ನಂ.12ರ ಬೂತ್ ಮಟ್ಟದ ಅಧಿಕಾರಿ (BLO) ಸೆಪ್ಟೆಂಬರ್ 30ರಂದು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಡಾ. ರವಿ ಪಾಟೀಲ್, ವಿಜಯ ಆಸ್ಪತ್ರೆ ಸಿಬ್ಬಂದಿ ಪ್ರಶಾಂತ ಮುಂದಿನಮನಿ, ಶಂಕರ್ ನಾಯಕ್ ಸೇರಿದಂತೆ ಇತರರನ್ನು ಪ್ರಕರಣದಲ್ಲಿ ಆರೋಪಿಗಳಾಗಿ ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 22ರಂದು ವೀರಭದ್ರನಗರದ ಮತಗಟ್ಟೆ ಸಂಖ್ಯೆ 195 ಮತ್ತು 196ರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಮತದಾರರ ಪಟ್ಟಿಯಲ್ಲಿ ಕಾನೂನುಬದ್ಧವಾಗಿ ಹೆಸರು ಹೊಂದಿರುವ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಹೆಸರುಗಳನ್ನು ಅಳಿಸಲು ಫಾರ್ಮ್ ನಂ.7 ಮೂಲಕ ಬೋಗಸ್ ಅರ್ಜಿಗಳನ್ನು ಸಲ್ಲಿಸಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ವೇಳೆ ಸ್ಥಳೀಯರು ಡಾ. ರವಿ ಪಾಟೀಲ್ ಸೇರಿದಂತೆ ಮೂವರನ್ನು ತಡೆದು ವಿಚಾರಣೆ ನಡೆಸಿದ್ದರು. ಬಳಿಕ ಘಟನೆ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು.
ಘಟನೆ ನಡೆದ ಎಂಟು ದಿನಗಳ ಬಳಿಕ ಬಿಎಲ್ಒ ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಪೊಲೀಸರು ಅಪರಾಧ ಸಂಖ್ಯೆ 218/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


