ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಠಾತ್ ಸಾವು ಬಿಜೆಪಿಯಲ್ಲಿ ದೊಡ್ಡ ಶಾಕ್ ನೀಡಿದೆ.
ಮೊದಲ ಮೂರು ಅವಧಿಯಲ್ಲಿ ಸುರೇಶ ಅಂಗಡಿ ಕೆಲಸ ಮಾಡಲಿಲ್ಲ ಎನ್ನುವ ಆರೋಪ ಹೊತ್ತಿದ್ದರು. ಆದರೆ ರೈಲ್ವೆ ಖಾತೆ ಸಚಿವರಾದ ನಂತರ ಅವರು ಹಳೆಯದನ್ನೆಲ್ಲ ಮರೆಸುವ ರೀತಿಯಲ್ಲಿ ಕೆಲಸ ಮಾಡಿದ್ದರು.
ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯಕ್ಕೂ ರೈಲ್ವೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದ ದಶಕಗಳ ಇನ್ನಷ್ಟು ಕನಸುಗಳು ನನಸಾಗುವ ನಿರೀಕ್ಷೆಯನ್ನು ಮೂಡಿಸಿದ್ದರು.
ಆದರೆ, ಇದ್ದಕ್ಕಿದ್ದಂತೆ ದೊಡ್ಡ ಶಾಕ್ ನೀಡಿ ಮರೆಯಾದರು. ಇದು ಯಾರೂ ನಿರೀಕ್ಷೆ ಮಾಡಿರಲಿಲ್ಲ, ಯಾರಿಗೂ ಬೇಕಿರಲಿಲ್ಲ. 3 ಅವಧಿಯಲ್ಲಿ ಬಯ್ಯುತ್ತಿದ್ದ ಬಿಜೆಪಿ ಕಾರ್ಯಕರ್ತರು, ಮುಖಂಡರೇ 4ನೇ ಅವದಿಯ ಅವರ ಕೆಲಸ ನೋಡಿ ಬಿಜೆಪಿಗೆ ಅವರು ದೊಡ್ಡ ಆಸ್ತಿಯಾಗಲಿದ್ದಾರೆ ಎನ್ನುವ ರೀತಿಯಲ್ಲಿ ಮಾತನಾಡತೊಡಗಿದ್ದರು. ಒಂದು ಹಂತದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಬಿಂಬಿಸತೊಡಗಿದ್ದರು.
ಈಗ ಎಲ್ಲವೂ ಶೂನ್ಯವಾಗಿದೆ. ಬಿಜೆಪಿ ಸುರೇಶ ಅಂಗಡಿ ಜಾಗ ತುಂಬುವವರ್ಯಾರು ಎನ್ನುವ ಚಿಂತೆಯಲ್ಲಿ ತೊಡಗುವಂತೆ ಮಾಡಿದೆ. ಇನ್ನು 6 ತಿಂಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಸಂಘ ಪರಿವಾರದಿಂದ ಬಂದವರು, ಉತ್ತಮ ಚಾರಿತ್ರ್ಯ ಉಳ್ಳವರಿಗಾಗಿ ಹುಡುಕಾಟ ಆರಂಭವಾಗಿದೆ.
ಸುರೇಶ ಅಂಗಡಿ ನಿಧನರಾಗಿ ಇನ್ನೂ ವಾರವೂ ಆಗಿಲ್ಲ. ಆದರೆ ಬಿಜೆಪಿಯೊಳಗೆ ಚರ್ಚೆ ಜೋರಾಗಿದೆ. ಆಕಾಂಕ್ಷಿಗಳು ಸಂಘದ ಮುಖಂಡರನ್ನು ಮತ್ತು ಹೈಕಮಾಂಡ್ ನ್ನು ಸಂಪರ್ಕಿಸುವ ಕೆಲಸ ಶುರು ಮಾಡಿದ್ದಾರೆ. ಆಗಲೇ ಕೆಲವರ ಹೆಸರು ಓಡಾಡತೊಡಗಿದೆ.
ಆಕಾಂಕ್ಷಿಗಳ್ಯಾರು?
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬದಲಿ ಅಭ್ಯರ್ಥಿಯನ್ನು ಹುಡುಕಬೇಕೆನ್ನುವ ಮಾತು ಕಳೆದ ಚುನಾವಣೆ ವೇಳೆ ಕೇಳಿಬಂದಿತ್ತು. ಕಾರಣ, ಸುರೇಶ ಅಂಗಡಿ ಹಿಂದೆಲ್ಲ ಕೆಲಸ ಮಾಡಲಿಲ್ಲ ಎನ್ನುವುದಾಗಿತ್ತು. ಆದರೆ ಈ ಬಾರಿ ಉತ್ತಮ ಕೆಲಸ ಮಾಡುತ್ತಿದ್ದುದರಿಂದ ಅಭ್ಯರ್ಥಿ ಬದಲಿಸುವ ಮಾತು ಗೌಣವಾಗಿತ್ತು. ಆಕಾಂಕ್ಷಿಗಳೆಲ್ಲ ತಣ್ಣಗಾಗಿದ್ದರು.
ಬರುವ ಚುನಾವಣೆಗೆ ಸುರೇಶ ಅಂಗಡಿಯವರ ಪತ್ನಿ ಮಂಗಲಾ ಅಂಗಡಿಯವರನ್ನು ಕಣಕ್ಕಿಳಿಸಿದರೆ ಹೇಗೆ ಎನ್ನುವ ಚರ್ಚೆ ಶುರುವಾಗಿದೆ. ಅನುಕಂಪದ ಮತಗಳನ್ನು ಗಿಟ್ಟಿಸಬಹುದು ಎನ್ನುವುದು ಲೆಕ್ಕಾಚಾರ. ಮಂಗಲಾ ಅಂಗಡಿ ಅಥವಾ ಪುತ್ರಿ ಡಾ. ಸ್ಫೂರ್ತಿ ಅವರನ್ನು ಕಣಕ್ಕಿಳಿಸುವ ಕುರಿತು ಅವರ ಸಂಬಂಧಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಒಲವು ಹೊಂದಿದ್ದಾರೆ ಎಂದು ಬಿಜೆಪಿ ಮೂಲಗಳು ಪ್ರಗತಿವಾಹಿನಿಗೆ ಹೇಳಿವೆ. ಆದರೆ ಅವರು ಅದಕ್ಕೆ ಸಿದ್ದರಿದ್ದಾರಾ ಎನ್ನುವುದು ಗೊತ್ತಿಲ್ಲ. ಸಧ್ಯಕ್ಕೆ ಅವರನ್ನು ಮಾತನಾಡಿಸುವ ಸ್ಥಿತಿಯಂತೂ ಇಲ್ಲ.
ಕಳೆದ ಚುನಾವಣೆಯಲ್ಲಿ ಅಭ್ಯರ್ಥಿ ಬದಲಿಸುವುದಾದರೆ ಇರಲಿ ಎಂದು ಬಿಜೆಪಿ ಯುವ ಪದಾಧಿಕಾರಿಯೊಬ್ಬರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿತ್ತು. ಆದರೆ ನಂತರದಲ್ಲಿ ಸುರೇಶ ಅಂಗಡಿಯವರಿಗೇ ಟಿಕೆಟ್ ಎನ್ನುವುದನ್ನು ಗಟ್ಟಿ ಮಾಡಲಾಗಿತ್ತು. ಈಗ ಅವರ ಹೆಸರೂ ಚಾಲ್ತಿಗೆ ಬರಬಹುದು. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಹೆಸರು ಸಂಘದ ವಲಯದಿಂದ ಪ್ರಸ್ತಾಪವಾಗಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯ ವೈದ್ಯಕೀಯ ವಿಭಾಗದ ಸಂಚಾಲಕಿಯೊಬ್ಬರು ಮತ್ತು ಆಟೋಮೊಬೈಲ್ ಉದ್ಯಮಿಯೊಬ್ಬರು ದೆಹಲಿವರೆಗೆ ಹೋಗಿ ಹೈಕಮಾಂಡ್ ನಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದಿದ್ದರು. ಗ್ರಾಮಪಂಚಾಯಿತಿ ಅಥವಾ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ನಿಮ್ಮನ್ನು ಪರಿಗಣಿಸೋಣ, ಅಷ್ಟರೊಳಗೆ ನಿಮ್ಮ ಕುಟುಂಬದ, ಸಂಬಂಧಿಕರ ಮತಗಳನ್ನಾದರೂ ಖಚಿತಪಡಿಸಿಕೊಳ್ಳಿ ಎಂದು ನೇರವಾಗಿ ಹೇಳಿ ಕಳಿಸಿದ್ದರು. ಇಷ್ಟಾದರೂ ಈ ಬಾರಿ ಮತ್ತೆ ಅವರು ಈಗಾಗಲೆ ಪ್ರಯತ್ನ ಆರಂಭಿಸಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಕರ್ನಾಟಕದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ನ್ಯಾಯವಾದಿ ಎಂ.ಬಿ.ಜಿರಲಿ, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಕಾರ್ಯದರ್ಶಿ ಕಿರಣ ಜಾಧವ, ಸಾಮಾಜಿಕ ಕಾರ್ಯಕರ್ತ ವೀರೇಶ ಕಿವಡಸಣ್ಣವರ್, ಮಾಜಿ ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ಮಾಜಿ ಶಾಸಕ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್, ಡಾ.ರವಿ ಪಾಟೀಲ ಮತ್ತಿತರರು ಆಸಕ್ತಿ ಹೊಂದಿದ್ದಾರೆ.
ಸಧ್ಯಕ್ಕೆ ಪಕ್ಷದೊಳಗೆ ಈ ವಿಷಯ ಗುಸು ಗುಸು ಚರ್ಚೆಯ ಹಂತದಲ್ಲಿದೆ. ಇನ್ನು 15 -10 ದಿನದಲ್ಲಿ ಈ ಬಗ್ಗೆ ಚಟುವಟಿಕೆ ಚುರುಕುಗೊಳ್ಳುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ