Latest

ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ವಿವಾಹ ಕಾರ್ಯಕ್ರಮ ನೋಂದಾಯಿತರಿಗೆ ಪರ್ಯಾಯ ವ್ಯವಸ್ಥೆ

ಪ್ರಗತಿವಾಹಿನಿ ಸುದ್ದಿ, ಧರ್ಮಸ್ಥಳ – ದಿನಾಂಕ ೨೯.೪.೨೦೨೧ ರಂದು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮಾಹಿಕ ವಿವಾಹ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಗಿದ್ದು, ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಸರಕಾರದ ಆದೇಶದಂತೆ ಈ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಇದರ ಬದಲಾಗಿ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡಿರುವ ಎಲ್ಲ ಜೋಡಿಗಳಿಗೂ ಕ್ಷೇತ್ರದ ವತಿಯಿಂದ ಆಶೀರ್ವಾದಪೂರ್ವಕವಾಗಿ ನೀಡಲಾಗುವ ವಿವಾಹ ಸಂಬಂಧಿ ವಸ್ತುಗಳಾದ ಧೋತಿ, ಸೀರೆ, ರವಿಕೆ ಕಣ, ಮಂಗಳಸೂತ್ರ ಮತ್ತಿತ್ಯಾದಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಯ ಕಾರ್ಯಕರ್ತರ ಮುಖೇನ ವಧುವಿನ ಮನೆಗೆ ಮುಟ್ಟಿಸಲಾಗುವುದು.
ಧರ್ಮಸ್ಥಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿರುವ ವಧು-ವರರು ತಮ್ಮ ಊರ ದೇವರ ಅಥವಾ ಕುಲದೇವರ ಸ್ಥಾನಗಳಲ್ಲಿ ಶಾಸ್ತ್ರೋಕ್ತವಾಗಿ ದಿನಾಂಕ ೨೯.೪.೨೦೨೧ರಂದು ನಿಗದಿತವಾಗಿರುವ ಗೋಧೋಳಿ ಲಗ್ನದಲ್ಲಿ ಯಾ ತಮಗೆ ಅನುಕೂಲವಾದ ದಿನಾಂಕ ಮತ್ತು ಮುಹೂರ್ತದಲ್ಲಿ ಮದುವೆ ಮಾಡಿಕೊಳ್ಳುವಂತೆ ಸೂಚಿಸಿದೆ.

ಮದುವೆಯನ್ನು ಸರಳವಾಗಿಯೂ, ಸರಕಾರದ ಕೋವಿಡ್ ಶರತ್ತುಬದ್ಧ ನಿಯಮಾವಳಿಯಂತೆ ಆಚರಿಸಿಕೊಳ್ಳುವಂತೆ ಸೂಚಿಸಿದೆ. ಮದುವೆಯ ಸಂದರ್ಭ ಯೋಜನೆಯ ಕಾರ್ಯಕರ್ತರೋರ್ವರು ಹಾಜರಿರುವರು. ನಂತರ ಕಾನೂನಿನಂತೆ ವಿವಾಹ ನೋಂದಣೆಯನ್ನು ತಾಲ್ಲೂಕಿನ ಉಪನೋಂದಾವಣಾಧಿಕಾರಿಯವರಲ್ಲಿ ಮಾಡಿಕೊಳ್ಳಲು ಸೂಚಿಸಿದೆ.

ತದನಂತರ ವಿವಾಹ ನೋಂದಣಿ ದಾಖಲಾತಿ ಪತ್ರದ ಝೆರಾಕ್ಸ್ ಪ್ರತಿಯನ್ನು ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಅರ್ಪಿಸಲು ಕ್ಷೇತ್ರಕ್ಕೆ ಕಳುಹಿಸಿಕೊಡುವಂತೆ ಸೂಚಿಸಿದೆ.
ಎಲ್ಲಾ ನೂತನ ವಧು-ವರರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಕೋರುತ್ತಾ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ  ಹೇಮಾವತಿ ವೀ. ಹೆಗ್ಗಡೆಯವರು ತಮ್ಮ ಆಶೀರ್ವಾದಗಳನ್ನು ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸೆಮಿ ಲಾಕ್ ಡೌನ್ : ಕನ್ಫರ್ಮ್ ಮಾಡಿದ ಸರಕಾರ: ಇಲ್ಲಿದೆ ಸ್ಪಷ್ಟೀಕರಣ ಆದೇಶ

Home add -Advt

Related Articles

Back to top button