*ಮಗು ಇದ್ದ ಮನೆಯಲ್ಲಿ ಸದಾ ನಗು; ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ*
ಪ್ರಗತಿವಾಹಿನಿ ಸುದ್ದಿ: ಮಗು ಇದ್ದ ಮನೆಯಲ್ಲಿ ಸದಾ ನಗು ಇರುತ್ತದೆ. ಸಶಕ್ತವಾದ ಭಾರತ ದೇಶ ನಿರ್ಮಿಸಲು ಪರಿಪೂರ್ಣ ವ್ಯಕ್ತಿತ್ವದ ಮಕ್ಕಳನ್ನು ರೂಪಿಸುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು.
ಧಾರವಾಡದ ಬಾಲಭವನ ಆವರಣದಲ್ಲಿ ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನದ ಸಂಯುಕ್ತ ಆಶ್ರಯದಲ್ಲಿ, ಮಕ್ಕಳ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಬಾಲ್ಯಾವಸ್ಥೆಯು ಜೀವನದ ಮುಖ್ಯ ಘಟ್ಟವಾದ್ದರಿಂದ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ತುಂಬಾ ಮುಖ್ಯ ಹಾಗೂ ಯಾವ ಮನೆಯಲ್ಲಿ ಮಗು ಇರುತ್ತದೋ ಆ ಮನೆಯಲ್ಲಿ ಸದಾ ನಗು ಇರುತ್ತದೆ ಎಂದು ಅವರು ಹೇಳಿದರು.
ಜೀವನದಲ್ಲಿ ಮುಂದೆ ಬರಬೇಕಾದರೆ ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಮುಂದೆ ಸಾಗಬೇಕು. ನಮ್ಮ ಜೊತೆಯಲ್ಲಿರುವವರೆಲ್ಲರೂ ಚೆನ್ನಾಗಿರಬೇಕೆಂದು ಬಯಸಬೇಕು. ಅರಮನೆಯಲ್ಲಿದ್ದರೂ ನೆರಮನೆ ಚೆನ್ನಾಗಿರಬೇಕು. ನನ್ನ ಸುತ್ತಮುತ್ತಲಿರುವವರ ಒಳಿತನ್ನು ಬಯಸುವ ಹೃದಯವಂತ ಮಕ್ಕಳು ನಮ್ಮವರಾಗಬೇಕು ಎಂದು ಅವರು ಹೇಳಿದರು.
ನಾವೆಲ್ಲ ಭಾರತ ಮಾತೆಯ ಮಕ್ಕಳು ಆ ಸದ್ಭಾವನೆಯಿಂದ ಯಾವುದೇ ಭೇದ ಭಾವ ಇಲ್ಲದೇ ಬಾಳಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಸಂಗಮೇಶ ಬಬಲೇಶ್ವರ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಅವರು ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇದೊಂದು ಉತ್ತಮ ವೇದಿಕೆ. ಇಂತಹ ಅವಕಾಶಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ವಿದ್ಯಾಕಾಶಿ ಎನಿಸಿರುವ ಧಾರವಾಡ ಜಿಲ್ಲೆಯು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆಯಬೇಕು ಎಂದರು.
ಮಕ್ಕಳ ಸಾಹಿತಿಗಳು ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕಿ ಡಾ. ಎಚ್.ಎಚ್.ಕುಕನೂರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸೃಜನಾತ್ಮಕ ಪ್ರದರ್ಶನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 09 ರಿಂದ 16 ವರ್ಷದ ಸುಮಾರು 185 ಮಕ್ಕಳು ಭಾಗವಹಿಸಿದ್ದರು.
ವಾದ್ಯ ಸಂಗೀತ, ತಬಲಾ, ಮೃದಂಗ, ಕೀಬೋರ್ಡ, ಕೊಳಲು, ಡೊಳ್ಳು ಮತ್ತು ನಗಾರಿ ಸ್ಫರ್ಧೆಗಳಿಗೆ ನೃತ್ಯ ಶಿಕ್ಷಕ ಸಯೈದ್ ಎ.ಎಮ್ ಹಾಗೂ ಗಾಯತ್ರಿ ದೇಶಪಾಂಡೆ ಮತ್ತು ಚಿತ್ರಕಲಾ ಸ್ಪರ್ಧೆಗೆ ಚಿತ್ರಕಲೆ ಶಿಕ್ಷಕ ವಿಜಯಕುಮಾರ ಗಾಯಕವಾಡ ಹಾಗೂ ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ ಸ್ಪರ್ಧೆಗೆ ಐ.ಜಿ ಉದಮೇಶಿ ಅವರು ತೀರ್ಪುಗಾರರಾಗಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕಾಂಚನಾ ಅಮಠೆ ಹಾಗೂ ಎಲ್ಲ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳ ವಿವರ
ಜಾನಪದ ನೃತ್ಯ ವಿಭಾಗದಲ್ಲಿ ಪ್ರೀತಿ ಗೌಡರ, ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಸ್ಮೃತಿ ಮಠದ, ವಾದ್ಯ ಸಂಗೀತ ವಿಭಾಗದಲ್ಲಿ ನಮದೇವ ಕನಕೂರ ಹಾಗೂ ಸಂಜು ಹೊನ್ನಾಪುರ, ನೂತನ ಆವಿಷ್ಕಾರದ ವಿಜ್ಞಾನ ವಿಭಾಗದಲ್ಲಿ ಸಮರ್ಥಗೌಡ ಗಿರಿಪ್ಪಗೌಡ ಹಾಗೂ ಸ್ವಾತಿ ಅರಳಿ, ಚಿತ್ರಕಲೆ ವಿಭಾಗದಲ್ಲಿ ಸಾನ್ವಿ ಯರಗೊಪ್ಪ ಮತ್ತು ಶಿವಾಷಿ ರೇವಣಕರ
ಅವರು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಆಯ್ಕೆ ಆಗಿದ್ದು, ಇವರು ಮುಂದಿನ ದಿನಗಳಲ್ಲಿ ಆಯೋಜಿಸುವ ರಾಜ್ಯಮಟ್ಟದ ಮಕ್ಕಳ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ