ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಡೀಮ್ಡ್ ಯುನಿವರ್ಸಿಟಿಯ, ಜೆ. ಎನ್. ಮೆಡಿಕಲ್ ಕಾಲೇಜಿನಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಕೆಎಲ್ಇ ಅಡ್ವಾನ್ಸ್ಡ್ ಸಿಮ್ಯುಲೇಶನ್ ಸೆಂಟರ್ ಮತ್ತು ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಅನ್ನು , ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ವಿ.ಜೋಶಿ ಅವರು ಗೌರವ ಅತಿಥಿಗಳಾಗಿದ್ದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಮತ್ತು ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ನ ಕುಲಾಧಿಪತಿಗಳಾದ ಡಾ.ಪ್ರಭಾಕರ್ ಕೋರೆ ಅವರು ಅಧ್ಯಕ್ಷತೆ ವಹಿಸಿದ್ದರು. ಕುಲಪತಿಗಳಾದ ಡಾ.ವಿವೇಕ್ ಎ. ಸಾವಜಿ, ಕುಲಸಚಿವರಾದ ಡಾ.ವಿ.ಎ.ಕೋತಿವಾಲೆ ಮತ್ತು ಜೆ.ಎನ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಎಸ್.ಮಹಂತಶೆಟ್ಟಿ ಉಪಸ್ಥಿತರಿದ್ದರು.
ಅಮಿತ್ ಶಾ ಅವರು ವಿವಿಧ ಸಿಮ್ಯುಲೇಶನ್ ಮಾಡ್ಯೂಲ್‌ಗಳು ಮತ್ತು ಕೇಂದ್ರದ ವಿವಿಧ ಸೌಲಭ್ಯಗಳನ್ನು ನೋಡಲು ಮತ್ತು ತಿಳಿದುಕೊಳ್ಳಲು ತೀವ್ರ ಆಸಕ್ತಿ ತೋರಿದರು. ವೈದ್ಯಕೀಯ ಶಿಕ್ಷಣ ಮತ್ತು ತರಬೇತಿಯಲ್ಲಿ ಇತ್ತೀಚಿನ ತಂತ್ರಜ್ಞಾನಗಳ ಸಂಯೋಜನೆಯನ್ನು ಅವರು ಶ್ಲಾಘಿಸಿದರು. ಕೆಎಲ್ಇ ಅಡ್ವಾನ್ಸ್ಡ್ ಸಿಮ್ಯುಲೇಶನ್ ಕೇಂದ್ರದ ಸಂಯೋಜಕರಾದ ಡಾ. ಅಭಿಜಿತ್ ಗೋಗಟೆ ಮತ್ತು ಡಾ.ರಾಜೇಶ್ ಮಾನೆ, ಕಾರ್ಯದರ್ಶಿಗಳಾದ ಡಾ.ಚೈತನ್ಯ ಕಾಮತ್ ಮತ್ತು ಡಾ.ಶ್ರೀದೇವಿ ಯೆಣ್ಣಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿದ್ದ ಗಣ್ಯರು ಜೆ.ಎನ್.ಮೆಡಿಕಲ್ ಕಾಲೇಜಿನ ವಿಶ್ವ ವಿಖ್ಯಾತ ಪ್ಯಾಥಾಲಜಿ ಮ್ಯೂಸಿಯಂಗೆ ಭೇಟಿ ನೀಡಿದರು. ಅಮಿತ್ ಶಾ ಅವರು ಹಲವಾರು ಅಪರೂಪದ ರೋಗಶಾಸ್ತ್ರದ ಮಾದರಿಯನ್ನು ಹೆಚ್ಚಿನ ಆಸಕ್ತಿಯಿಂದ ನೋಡಿದರು ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆಯ ಕೊಡುಗೆಯನ್ನು ಶ್ಲಾಘಿಸಿದರು.
ಕೆಎಲ್ಇ ಅಡ್ವಾನ್ಸ್ಡ್ ಸಿಮ್ಯುಲೇಶನ್ ಸೆಂಟರ್ ಅನ್ನು ಅತ್ಯಾಧುನಿಕ, ಹೈಟೆಕ್ ಹೈ-ಫಿಡೆಲಿಟಿ ಕಂಪ್ಯೂಟರೀಕೃತ ಸಿಮ್ಯುಲೇಟರ್‌ಗಳೊಂದಿಗೆ ಸ್ಥಾಪಿಸಲಾಗಿದೆ. ಇದು ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಬೋಧನೆ ಹಾಗೂ ಪ್ರಾಯೋಗಿಕ ತರಬೇತಿಗೆ ಅತ್ಯಂತ ಸಹಾಯಕವಾಗಿದೆ. ಇದರ ಮತ್ತೊಂದು ವಿಶೇಷತೆಯೆಂದರೆ ರೋಗಿಯ ಸುರಕ್ಷತೆ ಮತ್ತು ರೋಗಿಯ ಸ್ವಾಯತ್ತತೆಗೆ ಧಕ್ಕೆ ಬರದಂತೆ, ವೈದ್ಯರು ತಮ್ಮ ಶಸ್ತ್ರಚಿಕಿತ್ಸೆ ಮತ್ತು ಇತರೆ ವೈದ್ಯಕೀಯ ಕಾರ್ಯವಿಧಾನದ ಕೌಶಲ್ಯಗಳನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಕೋವಿಡ್-19 ಸಾಂಕ್ರಾಮಿಕದಂತಹ ಪರಿಸ್ಥಿತಿಯಲ್ಲಿ ಇದು ವಿಶೇಷವಾಗಿ ಪ್ರಸ್ತುತವೆನಿಸಿದೆ. ಸುರಕ್ಷಿತ ಮತ್ತು ನಿಯಂತ್ರಿತ ವಾತಾವರಣದಲ್ಲಿ ಸಿಮ್ಯುಲೇಶನ್ ಕೇಂದ್ರದಲ್ಲಿ ವೈದ್ಯಕೀಯ ಕಾರ್ಯವಿಧಾನದ ಕೌಶಲ್ಯಗಳನ್ನು ಕಲಿಯಲು, ವಿವಿಧ ಸಂಕೀರ್ಣ ಮತ್ತು ನಿರ್ಣಾಯಕ ಕ್ಲಿನಿಕಲ್ ಸನ್ನಿವೇಶಗಳನ್ನು ನಿರ್ಣಯಿಸಲು ಮತ್ತು ನಿರ್ವಹಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ಇದು ದೇಶದ ಅತ್ಯುತ್ತಮ ಸಿಮ್ಯುಲೇಶನ್ ಕೇಂದ್ರಗಳಲ್ಲಿ ಒಂದಾಗಿದ್ದು ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾದ ಮೊಟ್ಟಮೊದಲ ಕೇಂದ್ರ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ