ಡಿ.ಕೆ.ಶಿವಕುಮಾರ್ ಕ್ಷೇತ್ರ ಎಂದ ತಕ್ಷಣ ಅಮಿತ್ ಶಾ ಅಧಿಕಾರಿಗಳು ಬರುವುದನ್ನೇ ಬಿಟ್ಟರು
ಅರ್ಕಾವತಿ ಜಲಾಶಯ ಬಲದಂಡೆ ನಾಲೆಯ ಏತ ನೀರಾವರಿ ಪುನಶ್ಚೇತನ ಕಾಮಗಾರಿಯ ಪರೀಕ್ಷಾರ್ಥ ಚಾಲನೆಯನ್ನು ಉದ್ಘಾಟಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಾತುಗಳು
“ಮಲೆನಾಡು ಸೇರಿದಂತೆ ಇತರೆ ಕಡೆ ಉತ್ತಮ ಮಳೆಯಾಗುತ್ತಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ ಆದ ಕಾರಣಕ್ಕೆ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇವೆ. ಇದು ನನ್ನ ಬಹುದಿನದ ಕನಸು. ಇದರಿಂದ ಸಾವಿರ ಎಕರೆಗೂ ಹೆಚ್ಚು ಭೂಮಿಗೆ ನೀರಾವರಿ ಅನುಕೂಲವಾಗಲಿದೆ.
ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ ಒತ್ತಾಯ ಮಾಡಿ ಅವರನ್ನು ಕರೆದುಕೊಂಡು ಬಂದು ಅರ್ಕಾವತಿ ಬಲದಂಡೆ ನಾಲೆಯ ಏತ ನೀರಾವರಿ ಕಾಮಗಾರಿಯನ್ನು ಉದ್ಘಾಟಿಸಲಾಗಿತ್ತು.
ರೈತರು ಕಡಿಮೆ ಹಣಕ್ಕೆ ಭೂಮಿ ಕಳೆದುಕೊಂಡಿದ್ದಾರೆ
ಈ ಭಾಗದ ರೈತರು ಈ ಯೋಜನೆ ಸಾಕಾರಗೊಳ್ಳುವ ವೇಳೆಯಲ್ಲಿ ಕೇವಲ ಮೂರು- ನಾಲ್ಕು ಸಾವಿರಕ್ಕೆ ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಈ ವಿಚಾರ ನನಗೆ ಈಗಲೂ ಬೇಸರ ತರಿಸುತ್ತದೆ. ಹಣಕ್ಕೆ ಕಷ್ಟವಿದ್ದ ಕಾಲದಲ್ಲೂ ಎಸ್. ಎಂ. ಕೃಷ್ಣ ಅವರ ಕೈಯಿಂದ ಸುಮಾರು 300 ಜನ ರೈತರಿಗೆ ಎಕರೆ ಇಂತಿಷ್ಟು ಎಂದು ಹೆಚ್ಚುವರಿಯಾಗಿ ಏಳು ಕೋಟಿ ಪರಿಹಾರ ಕೊಡಿಸಲಾಯಿತು.
ದೇವರ ಅನುಗ್ರಹದಿಂದ ನಾನೇ ಇಂದು ನೀರಾವರಿ ಸಚಿವನಾಗಿದ್ದೇನೆ. ಇಂತಹ ನೂರು ಯೋಜನೆಗಳನ್ನು ಮಾಡುವ ಶಕ್ತಿ ನೀಡಿದ್ದಾನೆ. ಶಿಂಷಾ ನೀರನ್ನು ಸಾತನೂರು ಹಾಗೂ ಕೆಂಪಮ್ಮನ ದೊಡ್ಡಿವರೆಗೂ ತೆಗೆದುಕೊಂಡು ಹೋಗಲಾಗುತ್ತಿದೆ. ದೊಡ್ಡ ಆಲಹಳ್ಳಿ ಕೆರೆಗೂ ನೀರನ್ನು ತುಂಬಿಸಲಾಗುತ್ತಿದೆ. ಕೈಲಾಂಚ, ಮಾಗಡಿ, ಮಾತೂರು ಕೆರೆ, ಚನ್ನಪಟ್ಟಣ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಯಿತು. ಆದರೂ ನಮ್ಮ ಜನಕ್ಕೆ ಕೆಲಸದ ಮಹತ್ವ ಗೊತ್ತಾಗಲಿಲ್ಲ.
ನೀರಿನ ಮಹತ್ವ ಗೊತ್ತಾಗಬೇಕು ಅಂದರೆ ಕೋಲಾರಕ್ಕೆ ಹೋಗಿ
ಈ ಭಾಗದ ಜನಕ್ಕೆ ನೀರಿನ ಮಹತ್ವ ಗೊತ್ತಾಗಬೇಕು ಎಂದರೆ, ಕೋಲಾರ ಚಿಕ್ಕಬಳ್ಳಾಪುರ ಭಾಗಕ್ಕೆ ಹೋಗಿ ನೋಡಬೇಕು. ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ರೈತರು ಬದುಕುತ್ತಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆ.ಸಿ ವ್ಯಾಲಿ ಯೋಜನೆಯನ್ನು ಕಾರ್ಯಗತಗೊಳಿಸಿ, ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಕೋಲಾರದ ಕೆರೆಗಳನ್ನು ತುಂಬಿಸಿದ್ದೇವೆ. ಈಗ ಎತ್ತಿನಹೊಳೆಯಿಂದ ಕುಡಿಯುವ ನೀರನ್ನು ಕೊಡಲಾಗುತ್ತದೆ.
ಡಿ.ಕೆ.ಶಿವಕುಮಾರ್ ಕ್ಷೇತ್ರ ಎಂದ ತಕ್ಷಣ ಅಮಿತ್ ಶಾ ಅಧಿಕಾರಿಗಳು ಬರುವುದನ್ನೇ ಬಿಟ್ಟರು
ಸಾತನೂರು, ಕನಕಪುರ ಭಾಗದಲ್ಲಿ ನನ್ನನ್ನು ಜನಪ್ರತಿನಿಧಿಯಿಂದಾಗಿ ಆಯ್ಕೆ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದೀರ. ಅಮುಲ್ ಸಂಸ್ಥೆಗಿಂತ ಉತ್ತಮವಾದ ಉಪಕರಣಗಳನ್ನು ಶಿವನಹಳ್ಳಿಯ ಬಳಿಯ ಡೈರಿಯಲ್ಲಿ ಸ್ಥಾಪಿಸಿದ್ದೇನೆ. ಅಮಿತ್ ಷಾ ಅವರ ಕಚೇರಿ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿಕೊಂಡು ಹೋಗಿದ್ದರು. ಡಿ.ಕೆ.ಶಿವಕುಮಾರ್ ಕ್ಷೇತ್ರ ಎಂದು ತಿಳಿದ ತಕ್ಷಣ ಬರುವುದನ್ನೇ ಬಿಟ್ಟರು.
ರಸ್ತೆ, ನೀರಾವರಿ, ಶಾಲೆ, ಆಸ್ಪತ್ರೆ, ವಿದ್ಯುತ್ ಹೇಳಿದಂತೆ ಎಲ್ಲಾ ಕೆಲಸಗಳನ್ನು ನನ್ನ ಕ್ಷೇತ್ರಕ್ಕೆ ಮಾಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಒಂದಷ್ಟು ವ್ಯತ್ಯಾಸವಾಯಿತು. ಏಕೆ ಎಂದು ಅರ್ಥವಾಗುತ್ತಿಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಬೇಕು.
ಬಯಲು ಸೀಮೆ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಷ್ಟಾಗಿ ಮಳೆ ಬಿದ್ದಿಲ್ಲ. ಕಡಲೆಕಾಯಿ, ಹುರುಳಿಯನ್ನು ಹಾಕಿಕೊಳ್ಳಬಹುದು ಹೊರತು ಅಷ್ಟೊಂದು ಅನುಕೂಲವಾಗಿಲ್ಲ. ಈ ಯೋಜನೆಯಿಂದ ಅಂತರ್ಜಲ ಹೆಚ್ಚಾಗುತ್ತದೆ. ರೇಷ್ಮೆ ಸೇರಿದಂತೆ ಇತರೆ ಬೆಳೆಗೆ ಅನುಕೂಲವಾಗಬಹುದು.
ಆಸ್ತಿಗಳನ್ನು ಮಾರಿಕೊಳ್ಳಬೇಡಿ
ಈ ಭಾಗದ ಜನರಿಗೆ ನಾನು ಸಲಹೆ ನೀಡುತ್ತಿದ್ದೇನೆ. ನಿಮ್ಮಗ ಆಸ್ತಿಗಳ ಮೌಲ್ಯವನ್ನು ಹೆಚ್ಚು ಮಾಡುತ್ತೇನೆ, ಯಾರು ಮಾಡಿಕೊಳ್ಳಬೇಡಿ. ನನ್ನ ತಲೆಯಲ್ಲಿ ಒಂದಷ್ಟು ಲೆಕ್ಕಾಚಾರಗಳಿವೆ, ನನ್ನ ಆಲೋಚನೆಗಳು ನಿಮಗೆ ಈಗ ಅರ್ಥವಾಗುತ್ತಿರಬಹುದು.
ಮೇಕೆದಾಟು ವಿಚಾರದಲ್ಲಿ ನ್ಯಾಯ ದೊರೆಯುವ ಭರವಸೆಯಿದೆ
ಬಿಜೆಪಿ ಸರ್ಕಾರ ಸಹಕಾರ ಕೊಟ್ಟರೆ ಎಲ್ಲವೂ ಸಾಧ್ಯ. ನ್ಯಾಯಾಲಯದಲ್ಲಿ ಮೇಕೆದಾಟು ವಿಚಾರವಾಗಿ ನಮಗೆ ನ್ಯಾಯ ದೊರೆಯುವ ಭರವಸೆ ಇದೆ. ಕನಕಪುರ ಭಾಗದ ಜನರಿಗೆ ಅನುಕೂಲವಾಗದೆ ಇರಬಹುದು. ಆದರೆ ರಾಜ್ಯದ ಹಿತಕ್ಕೆ ಒಳ್ಳೆಯದಾಗುತ್ತದೆ. ಕಾವೇರಿ ಭಾಗದ ಜನರಿಗೆ, ಬೆಂಗಳೂರಿನ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಸುಮಾರು 550 ಎಕರೆಯಷ್ಟು ರೈತರ ಜಮೀನು ಹೋಗಬಹುದು. ಅವರಿಗೆ ಉತ್ತಮ ಪರಿಹಾರ ನೀಡಿ, ಪರ್ಯಾಯ ಭೂಮಿಯನ್ನು ಕಲ್ಪಿಸಲಾಗುವುದು. ಪಡುವಣ, ಸಂಗಮ ಇವುಗಳಿಗೆ ಸ್ವಲ್ಪ ತೊಂದರೆ ಆಗಬಹುದು ಆದರೆ ರಾಜ್ಯದ ಹಿತ ಮುಖ್ಯ.
ಸುರೇಶ್ ಬಡವರ ಸೇವೆ ಮಾಡುವವರನ್ನು ಮಾತ್ರ ಸುತ್ತ ಇಟ್ಟುಕೋ
ನಮ್ಮನ್ನು ಹೊತ್ತು ಮೆರೆಸಿದ ಜನರನ್ನು ಬಿಟ್ಟು ಸೂಟು ಬೂಟು ಹಾಕಿದವರನ್ನು ಪೊಲೀಸರು ಮತ್ತು ಗನ್ ಮ್ಯಾನ್ ಗಳು ನಮ್ಮ ಬಳಿಗೆ ಕಳಿಸುತ್ತಾರೆ. ಈ ಕಾರಣಕ್ಕೆ ಸುರೇಶ್ ಅವರಿಗೆ ಸಲಹೆ ನೀಡಿದ್ದು ನೀನೆ ಸುತ್ತ ಬಡವರ ಸೇವೆ ಮಾಡುವರು ಮಾತ್ರ ಇಟ್ಟುಕೋ ಎಂದು ಹೇಳಿದ್ದೀನೆ.
ಕುಟುಂಬದ ಜೊತೆ ವಿದೇಶಿ ಪ್ರವಾಸ
ಕುಟುಂಬದ ಜೊತೆಗೆ ವಿದೇಶಿ ಪ್ರವಾಸ ಹೋಗುತ್ತಿದ್ದು ಈ ವಾರ ನಿಮ್ಮ ಸೇವೆಗೆ ನಾನು ಲಭ್ಯವಿರುವುದಿಲ್ಲ. ಆನಂತರ ಇಂದಿನಂತೆ ನಿಮ್ಮೆಲ್ಲರ ಅಹವಾಲುಗಳನ್ನು ನಾನು ಸ್ವೀಕರಿಸುತ್ತೇನೆ.
ಶಿವಲಿಂಗೇಗೌಡರು ಎಂಎಲ್ಎ ಆಗಿದ್ದ ಕಾಲ. ಆಗ ಇಲ್ಲಿನ ಸ್ಥಳೀಯ ನಾಯಕರಾದ ನಾಗಣ್ಣ ಅವರು ಬಂದು ನನ್ನನ್ನು ಭೇಟಿಯಾಗಿ ಹಾರೋಬೆಲೆ ಭಾಗದಲ್ಲಿ ಇದ್ದ ಸಿಮೆಂಟ್ ಕಾರ್ಖಾನೆಗಳು ವಾಪಸ್ ಹೋಗುತ್ತಿವೆ. ಈಗ ನೀರಾವರಿ ಕುರಿತಾಗಿ ಒಂದಷ್ಟು ಕೆಲಸ ಮಾಡಿ ಎಂದು ಮನವಿ ಮಾಡಿದ್ದರು.
ವೀರೇಂದ್ರ ಪಾಟೀಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಪುಟ್ಟಸ್ವಾಮಿಗೌಡರನ್ನು ಇಲ್ಲಿಗೆ ಕರೆದುಕೊಂಡು ಬಂದು, ಗುತ್ತಿಗೆದಾರರಿಗೆ ಸೇರಿದ್ದ ಶೆಡ್ಒಂದರಲ್ಲಿ ಊಟವನ್ನು ಹಾಕಿಸಿದ್ದೆ. ಆಗ ಪುಟ್ಟಸ್ವಾಮಿಗೌಡರು ಶಿವಕುಮಾರ್ ಕಾರ್ಯಕರ್ತರ ಮನೆಯಲ್ಲಿ ಊಟ ಹಾಕಿಸುವುದು ಬಿಟ್ಟು ಗುತ್ತಿಗೆದಾರನ ಶೆಡ್ಡಿನಲ್ಲಿ ಊಟ ಹಾಕಿಸುತ್ತಿದ್ದೀಯಲ್ಲ? ಎಂದು ಬಿಟ್ಟರು.
ಈ ಭಾಗದಲ್ಲಿ ದೊಡ್ಡ ಮನೆಗಳು ಇರಲಿಲ್ಲ. ಆದ ಕಾರಣಕ್ಕೆ ಅಲ್ಲಿ ಊಟ ಹಾಕಿಸಿದ್ದೆ. ಶಿವಣ್ಣ ಎನ್ನುವರದ್ದು ಮಾತ್ರ ಒಂದು ಸ್ವಲ್ಪ ದೊಡ್ಡ ಮನೆಯಾಗಿತ್ತು. ಪುಟ್ಟಸ್ವಾಮಿಗೌಡರು ಹೀಗೆ ಹೇಳಿಬಿಟ್ಟರಲ್ಲ ಎಂದು ಸ್ವಲ್ಪ ಬೇಸರವಾಗಿತ್ತು. ಆಗ ಸ್ಥಳೀಯರೊಬ್ಬರು ಮನೆಯನ್ನು ಮಾರುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ, ನನ್ನ ಗೆಳೆಯರಾದ ಸಂಪತ್ ಅವರನ್ನು ಕಳಿಸಿ 20 ಎಕರೆ ಜಮೀನಿನ ಜೊತೆಗೆ ಕೋಡಹಳ್ಳಿಯಲ್ಲಿ ಮನೆಯನ್ನು ತೆಗೆದುಕೊಂಡೆ. ಕೋಡಹಳ್ಳಿಯಲ್ಲಿ ಈ ಮೊದಲೇ ಟೆಂಟ್ ಇದ್ದರೂ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರಲಿಲ್ಲ.
ಎತ್ತಿದ ಹೊಳೆ ನಮ್ಮ ಬದುಕಿಗೆ ಕಿರೀಟ
ನಮ್ಮ ಬದುಕಿಗೆ ದೊಡ್ಡ ಕಿರೀಟವಾದಂತಹ ಎತ್ತಿನ ಹೊಳೆ ಯೋಜನೆಗೆ ಬಾಗಿನ ಅರ್ಪಿಸಿದ್ದೇನೆ. ಸಮ್ಮಿಶ್ರ ಸರ್ಕಾರ ಇದ್ದಾಗ ನೀರಾವರಿ ಸಚಿವನಾಗಿದ್ದೆ. ಆಗ ಯಾವ ಸ್ಥಿತಿಯಲ್ಲಿತ್ತೊ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಅದೇ ಸ್ಥಿತಿಯಲ್ಲಿತ್ತು. ಅಲ್ಲಿದ್ದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ, ಇನ್ನೊಂದು ವರ್ಷದಲ್ಲಿ ಇಲ್ಲಿನ ನೀರು ಎತ್ತದಿದ್ದರೆ ನಾನು ಇಲ್ಲಿಗೆ ಮತ್ತೆ ಬರುವುದಿಲ್ಲ ಎಂದು ಶಪಥ ಮಾಡಿ ಛಲತೊಟ್ಟು ಮುಗಿಸಿದೆ.
ಎತ್ತಿನಹೊಳೆ ಎಂದರೆ ಎತ್ತಿಗೆ ಮಾತ್ರ ಕುಡಿಯುವಷ್ಟು ನೀರಿದೆ ಇಲ್ಲಿ ಎಂದು ಇಂಜಿನಿಯರ್ ಒಬ್ಬರನ್ನು ಪತ್ರಕರ್ತರ ಕೇಳಿದ್ದರಂತೆ. ಇಲ್ಲಿಂದ ನೀರು ತೆಗೆದು ಕೋಲಾರಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದರಂತೆ. ಮೋಹನ್ ರಾಮ್ ಎನ್ನುವ ಇಂಜಿನಿಯರ್ ಅವರು ಈ ರೀತಿ ಆಕ್ಷೇಪ ಎತ್ತುತ್ತಿದ್ದಾರೆ ಎಂದು ನನ್ನ ಗಮನಕ್ಕೆ ತಂದರು. ಪ್ರಸ್ತುತ ಅವರು ಆಲಮಟ್ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಎತ್ತಿನಹೊಳೆಗೆ ಅವರಿಂದಲೂ ನಾನು ಬಾಗಿನ ಅರ್ಪಿಸಿ, ನಿನ್ನ ಬಳಿ ಆಕ್ಷೇಪ ಎತ್ತಿದವರಿಗೆ ಈ ಕೆಲಸವನ್ನು ತೋರಿಸು ಎಂದು ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ