ಪ್ರಗತಿವಾಹಿನಿ ಸುದ್ದಿ, ಗೋಕಾಕ – ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ತಿಂಗಳು 16ರಂದು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಅವರು, ಗೋಕಾಕ ನಗರದ ಸಚಿವರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ನೂತನ ಗ್ರಾಮ ಪಂಚಾಯತ ಸದಸ್ಯರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನನಗೆ ಆದರ್ಶರಾದ ಕೇಂದ್ರ ಗೃಹ ಸಚಿವ ಅಮೀತ್ ಶಾ ಇದೆ ಜ.೧೬ಕ್ಕೆ ಬೆಳಗಾವಿಗೆ ಆಗಮಿಸಲಿದ್ದು, ಎಲ್ಲ ಕ್ಷೇತ್ರಗಳ ಕಾರ್ಯಕರ್ತರು ೨ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ ಪಕ್ಷದ ಶಕ್ತಿಯನ್ನು ತೋರಿಸಬೇಕು ಎಂದರು ಸಚಿವ ರಮೇಶ ಜಾರಕಿಹೊಳಿ.
ಅಧಿಕಾರದ ಆಸೆಗಾಗಿ ನಾನು ಬಿಜೆಪಿಗೆ ಬಂದವನಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೀತ ಶಾ ಅವರ ಆಡಳಿತ ವೈಖರಿ, ಅವರ ತತ್ವಾದರ್ಶಗಳನ್ನು ಮನಗಂಡು ನಾನು ಬಿಜೆಪಿ ಪಕ್ಷ ಸೇರಿದ್ದೇನೆ. ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಪಕ್ಷವನ್ನು ಸೇರಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣಾ ಬಿಜೆಪಿ ಟಿಕೆಟ್ ದಿ.ಸುರೇಶ ಅಂಗಡಿ ಕುಟುಂಬದವರಿಗೆ ನೀಡಬೇಕು. ದಿ.ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅಥವಾ ಕುಟುಂಬದ ಯಾರಿಗಾದರೂ ಟೀಕೇಟ್ ನೀಡಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದ್ರೆ ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
ಪಕ್ಷದ ಕಾರ್ಯಕರ್ತರ ಗೊಂದಲದಲ್ಲಿ ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮುನ್ನಡೆ ಸಾಧಿಸಿರಬಹುದು. ನಾನು ಮನಸ್ಸು ಮಾಡಿದರೆ ೨೪ ಗಂಟೆಗಳಲ್ಲಿ ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರಗಳಲ್ಲಿ ಗ್ರಾಪಂ ಸದಸ್ಯರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬಹುದು. ಕಾಂಗ್ರೇಸ್ ಮುಖಂಡರು ಇದು ದೊಡ್ಡ ಸಾಧನೆ ಎಂದು ಬಿಗಬಾರದು ಎಂದರು.
ಬೆಳಗಾವಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸುವ ಎಲ್ಲ ಪ್ರಯತ್ನವನ್ನು ಮಾಡಲು ಸಿದ್ಧರಿದ್ದೇವೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರು ಗ್ರಾಮ ಮಟ್ಟದಲ್ಲಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕರು ಮಾಡದಂತ ಕೆಲಸಗಳನ್ನು ಗ್ರಾಮ ಪಂಚಾಯತ ಸದಸ್ಯರು ಮಾಡಬಹುದು. ಸರಕಾರದ ಅನುದಾನ ನೇರವಾಗಿ ಗ್ರಾಮ ಪಂಚಾಯತಗಳಿಗೆ ಬರುತ್ತದೆ. ಇದನ್ನು ಸದುಪಯೋಗ ಪಡಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ನೂತನ ಗ್ರಾಪಂ ಸದಸ್ಯರಿಗೆ ಸಚಿವ ರಮೇಶ ಜಾರಕಿಹೊಳಿ ಕಿವಿ ಮಾತು ಹೇಳಿದರು.
ಸತತ ನಾಲ್ಕನೇ ಬಾರಿಗೆ ಗೋಕಾಕ ಮತಕ್ಷೇತ್ರದ ಎಲ್ಲ ಪಂಚಾಯತಿಗಳು ನಮ್ಮ ತೆಕ್ಕೆಗೆ ಬಂದಿವೆ. ಜಾರಕಿಹೊಳಿ ಕುಟುಂಬದ ಮೇಲೆ ಪ್ರೀತಿ ವಿಶ್ವಾಸವಿಟ್ಟು ಆಶೀರ್ವದಿಸುತ್ತಿರುವುದರಿಂದ ರಾಜ್ಯ ಮಟ್ಟದಲ್ಲಿ ಬೆಳೆದು ನಿಂತಿರುವೆ ಎಂದರು.
ಮನಸ್ಸು ಮಾಡಿದರೆ ಎಲ್ಲ ಪಂಚಾಯತಿಗಳಲ್ಲಿ ಅವಿರೋಧ ಆಯ್ಕೆ ಮಾಡಬಹುದಿತ್ತು, ಒಳ್ಳೆಯ ಅಭ್ಯರ್ಥಿಗಳ ಆಯ್ಕೆಯ ಉದ್ದೇಶದಿಂದ ಈ ಬಾರಿಯ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅವಿರೋಧ ಆಯ್ಕೆಮಾಡದೇ ಸ್ಫರ್ಧಿಸಲು ಅವಕಾಶ ಮಾಡಿಕೊಡಲಾಯಿತು. ಸೋತವರು ಮತ್ತು ಗೆದ್ದವರು ನಮ್ಮವರೇ. ಆದರೆ ಸೋತವರನ್ನು ಪ್ರೀತಿಸುತ್ತೇನೆ ಎಂದರು.
ಗೋಕಾಕ ಮತಕ್ಷೇತ್ರಗಳ ಗ್ರಾಮ ಪಂಚಾಯತಗಳಲ್ಲಿಯ ೯ ಜನ ಸದಸ್ಯರು ಮಾತ್ರ ಬಿಜೆಪಿಯಿಂದ ಹೊರಗಿದ್ದಾರೆ. ಅವರಲ್ಲಿ ಐವರು ನನ್ನನ್ನು ಸಂಪರ್ಕಿಸಿದ್ದಾರೆ. ಗ್ರಾಪಂ ಸದಸ್ಯರು ಗ್ರಾಮದಲ್ಲಿ ಪ್ರತಿ ದಿನ ಇರುವವರು ತಾವಾಗಿರುತ್ತೀರಿ, ಇದರಿಂದ ಗ್ರಾಮದ ಸಮಸ್ಯೆಗಳು ನಿಮಗೆ ಗೊತ್ತಿರುತ್ತವೆ. ತಾವುಗಳು ಜನರ ಧ್ವನಿಯಾಗಿ, ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡಬೇಕು. ನಿಮಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಯೋಗಿಕೊಳ್ಳದ ಗಟ್ಟಿ ಬಸವಣ್ಣ ದೇವಸ್ಥಾನ ಬಳಿ ಡ್ಯಾಂ ನಿರ್ಮಾಣಕ್ಕೆ ೧೦೦೦ ಸಾವಿರ ಕೋಟಿ ರೂಗಳ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೆ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಗೋಕಾಕ ಹಾಗೂ ಬೆಳಗಾವಿಯನ್ನು ಮಾದರಿಯಾಗಿ ಮಾಡಲಾಗುವುದು ಎಂದರು.
ಮುಂಬರುವ ಲೋಕಸಭಾ ಚುನಾವಣೆ ಹಾಗೂ ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಪ್ರವೃತ್ತರಾಗುವಂತೆ ಸಚಿವ ರಮೇಶ ಜಾರಕಿಹೊಳಿ ಕಾರ್ಯಕರ್ತರಿಗೆ ಕರೆ ನೀಡಿದರು.
ವೇದಿಕೆಯ ಮೇಲೆ ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಮುಖಂಡರುಗಳಾದ ಶಾಮಾನಂದ ಪೂಜೇರಿ, ಸಿದ್ದಲಿಂಗ ದಳವಾಯಿ, ಡಿ ಎಮ್ ದಳವಾಯಿ, ಸುರೇಶ ಪಾಟೀಲ, ಸಿದ್ಧಗೌಡ ಪಾಟೀಲ, ಜ್ಯೋತಿ ಕೋಲಾರ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರು ಗೋಕಾಕ ಮತಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ೩೦೦ಕ್ಕೂ ಹೆಚ್ಚು ಗ್ರಾಮ ಪಂಚಾಯತ ಸದಸ್ಯರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಮುಖಂಡರುಗಳಾದ ಶಾಮಾನಂದ ಪೂಜೇರಿ, ಸಿದ್ದಲಿಂಗ ದಳವಾಯಿ, ಡಿ ಎಮ್ ದಳವಾಯಿ, ಸುರೇಶ ಪಾಟೀಲ, ಸಿದ್ಧಗೌಡ ಪಾಟೀಲ, ಜ್ಯೋತಿ ಕೋಲಾರ ಸೇರಿದಂತೆ ಅನೇಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ