
ಪ್ರಗತಿವಾಹಿನಿ ಸುದ್ದಿ: ಯಕ್ಷಗಾನ ಹಿರಿಯ ಭಾಗವತ, ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ ದಕ್ಷಿಣ ಕನ್ನಡ ಜಿಲ್ಲೆಯ ಅರಸಿನಮಕ್ಕಿ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.
ಅವರಿಗೆ 65 ವರ್ಷ ವಯಸ್ಸಾಗಿತ್ತು. ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾಗಿದ್ದರು. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರಸರಾಗ ಚಕ್ರವರ್ತಿ ಎಂದೇ ಬಿರುದು ಪಡೆದಿದ್ದರು.
ಎಡನೀರು ಮಠದ ಪರಮಶಿಶ್ಯರಾಗಿದ್ದ ಅಮ್ಮಣ್ಣಾಯ ಅವರು ತನ್ನ ಜೀವನದ ಅತಿಹೆಚ್ಚು ಭಾಗವನ್ನು ಯಕ್ಷಗಾನ ಭಾಗವತಿಕೆಯಲ್ಲಿ ಎಡನೀರು ಮಠದ ಮೇಳ ಹಾಗೂ ಎಡನೀರು ಕ್ಷೇತ್ರದಲ್ಲಿಯೇ ಮಾಡಿರುವುದು ವಿಶೇಷ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿನೇಶ್ ಅಮ್ಮಣ್ಣಾಯ ಇಂದು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.