
ಪ್ರಗತಿವಾಹಿನಿ ಸುದ್ದಿ: ಅಮೃತಸರ-ಸಹರ್ಸಾ ಗರೀಬ್ ರಥ ಎಕ್ಸ್ ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಧಗ ಧಗನೆ ಹೊತ್ತಿ ಉರಿದಿದೆ.
ಪಂಜಾಬ್ ನ ಅಮೃತಸರದಿಂದ ಸಹರ್ಸಾಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಮೂರು ಬೋಗಿಗಳು ಹೊತ್ತಿ ಉರಿದಿವೆ. ಒಂದು ಬೋಗಿಯಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಅಂಬಾಲದಿಂದ ಅರ್ಧ ಕಿ.ಮೀ ದೂರವಿದ್ದ ರೈಲನ್ನು ಸಿರ್ಹಿಂದ್ ರೈಲು ನಿಲ್ದಾಣದ ಬಳಿ ನಿಲ್ಲಿಸಲಾಯಿತು. ತಕ್ಷಣ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ಬೆಂಕಿ ಅಕ್ಕಪಕ್ಕದ ಬೋಗಿಗೂ ವ್ಯಾಪಿಸಿದ್ದು, ಮೂರು ಬೋಗಿಗಳು ಹೊತ್ತಿ ಉರಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.