ರೈತ ಕಾರ್ಮಿಕರ ಬೇಡಿಕೆಗಳ ಕುರಿತು ಮನವಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ಪ್ರಾಂತ ರೈತ ಸಂಘ , ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಇವುಗಳ ಜಂಟಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಮನವಿಯ ಪೂರ್ಣ ವಿವರ ಹೀಗಿದೆ –
ರೈತ ಕಾರ್ಮಿಕರ ಬೇಡಿಕೆಗಳ ಕುರಿತು
ರಾಜ್ಯದಲ್ಲಿ ತಮ್ಮ ಸರಕಾರ ಅಧಿಕಾರವಹಿಸಿಕೊಂಡು ೧ ತಿಂಗಳು ಕಳೆದರೂ ರಾಜ್ಯದಲ್ಲಿ ಸರಕಾರ ಇದೆಯೋ-ಇಲ್ಲವೋ ಎಂಬಂತೆ ಗೋಚರಿಸುತ್ತದೆ. ರಾಜ್ಯದಲ್ಲಿ ಸುಮಾರು ೨೨ ಜಿಲ್ಲೆಗಳ, ೧೦೦ ತಾಲೂಕುಗಳ ಮೇಲ್ಪಟ್ಟು ಪ್ರವಾಹದಿಂದಾಗಿ ಜನರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ತುಂಬಾ ತೊಂದರೆಯಲ್ಲಿ ಇದ್ದಾರೆ. ರೈತರು ತಾವು ಬೆಳೆದ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ಇಂತಹ ಪರಸ್ಥಿತಿಯಲ್ಲಿ ತಾವು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಕೂಡಲೇ ಪರಿಹಾರಕ್ಕಾಗಿ ರೂ.೧೦ ಸಾವಿರ ಕೋಟಿ ನೀಡಲು ಪ್ರಧಾನಮಂತ್ರಿಯವರಿಗೆ ಒತ್ತಾಯಿಸಬೇಕು. ಹಾಗೂ ರಾಜ್ಯದಲ್ಲಿ ಪ್ರವಾಹ ಬಂದ ಜಿಲ್ಲೆಗಳಲ್ಲಿ ಸರಿಯಾದ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಹಾಗೂ ದುಡಿಯುವ ಜನರಿಗೆ ಕನಿಷ್ಠ ವೇತನ ನೀಡಲು ಕ್ರಮ ವಹಿಸಬೇಕೆಂದು ಈ ಕೆಳಗಿನ ಬೇಡಿಕೆಗಳಿಗಾಗಿ ಒತ್ತಾಯಿಸುತ್ತೇವೆ.
ಕಾರ್ಮಿಕರ ಪ್ರಮುಖ ಬೇಡಿಕೆಗಳು:
೧. ಅಸಂಘಟಿತ, ಸಂಘಟಿತ ಹಾಗು ಯೋಜನಾ ಕಾರ್ಮಿಕರಿಗೆ ಮಾಸಿಕ ಕನಿಷ್ಟ ವೇತನವನ್ನು ರೂ. ೧೮೦೦೦/-(೨೦೧೬ರ ಬೆಲೆ ಸೂಚ್ಯಾಂಕದ ಆಧಾರದಲ್ಲಿ) ಬೆಲೆ ಏರಿಕೆಗೆ ತಕ್ಕಂತ ರೀತಿಯಲ್ಲಿ ತುಟ್ಟಿ ಭತ್ಯೆಯನ್ನು ಒಳಗೊಂಡು ನಿಗಧಿ ಪಡಿಸಬೇಕು. ಒಟ್ಟು ವ್ಯಾಪಾರ ಚಟುವಟಿಕೆಯಲ್ಲಿ ಸೃಷ್ಟಿಯಾಗುವ ಸಂಪತ್ತಲ್ಲಿ ಮಾಲೀಕರ ಲಾಭದ ಪಾಲು ಹೆಚ್ಚಾಗುತ್ತಿದ್ದು, ದುಡಿಮೆಗಾರರ ವೇತನದ ಪಾಲು ಕುಸಿಯುತ್ತಿದೆ. ಇದರಿಂದಾಗಿ ಉತ್ಪನ್ನಗಳ ಮಾರಾಟವು ಕುಸಿಯುತ್ತಿದೆ. ಉದ್ಯೋಗ ನಷ್ಟವಾಗುತ್ತದೆ. ಕನಿಷ್ಟ ವೇತನದ ಹೆಚ್ಚಳ ಹಾಗೂ ಅದರ ಸಮರ್ಪಕ ಜಾರಿಗೆ ಒತ್ತಾಯಿಸುತ್ತಿದ್ದೇವೆ.
೨. ಖಾಯಂ ಉದ್ಯೋಗಿಗಳ ಬದಲಾಗಿ, ಯಾವುದೇ ಕಾನೂನು ರಕ್ಷಣೆ, ಕನಿಷ್ಟ ವೇತನ, ಸಾಮಾಜಿಕ ರಕ್ಷಣಾ ಯೋಜನೆಗಳ ಸವಲತ್ತುಗಳಿಲ್ಲದೆ ದುಡಿಯುವ ಗುತ್ತಿಗೆ ಹಾಗು ತರಬೇತಿ ಕಾರ್ಮಿಕರನ್ನು ನೇಮಕ ಮಾಡಲು ಅನುವಾಗುವ ಉದ್ಯೋಗ ನೀತಿಗಳಿಂದಾಗಿ ದೇಶವು ಅತಿ ತೀವ್ರವಾದ ನಿರುದ್ಯೋಗವನ್ನು ಎದುರಿಸುತ್ತದೆ. ದೇಶದ ಯುವ ಜನತೆಯ ಉದ್ಯೋಗ ಅವಕಾಶಗಳನ್ನು ಕಸಿಯುತ್ತಿರುವ ಈ ಗುಲಾಮ ಪದ್ಧತಿಯನ್ನು ರದ್ಧುಗೊಳಿಸಬೇಕು. ರಾಜ್ಯ, ಕೇಂದ್ರ ಸರ್ಕಾರಗಳಲ್ಲಿ ಖಾಲಿಯಾಗಿರುವ ಉದ್ಯೋಗಗಳಿಗೆ ನೇಮಕಾತಿಯನ್ನು ಮಾಡಬೇಕು. ಖಾಸಗಿ ರಂಗದಲ್ಲಿಯು ಖಾಯಂ ಉದ್ಯೋಗ ಸೃಷ್ಟಿಯನ್ನು ಖಾತರಿಗೊಳಿಸುವ ನೀತಿಗಳನ್ನು ಜಾರಿಗೆ ತರಬೇಕು.
೩. ಈ ದೇಶದ ರಕ್ಷಣೆಗೆ, ಕೈಗಾರಿಕಾ ಅಭಿವೃದ್ಧಿಗೆ, ಸಾಮಾಜಿಕ ನ್ಯಾಯಕ್ಕೆ ಕಾರಣವಾಗಿರುವ ಸಾರ್ವಜನಿಕ ಉದ್ಧಿಮೆಗಳನ್ನು ಖಾಸಗಿಕರಣ ಮಾಡುವ ದೇಶದ್ರೋಹಿ ನೀತಿಗಳನ್ನು ಕೈಬಿಡಬೇಕು. ಉತ್ಪಾದನಾ ವಲಯ, ವಿಮೆ-ಬ್ಯಾಂಕ್-ಶೀಕ್ಷಣ-ಆರೋಗ್ಯ ವಲಯಗಳಲ್ಲಿ ಸರಕಾರದ ಬಂಡವಾಳದ ಎಲ್ಲಾ ರೀತಿಯ ಹಿಂಬಡಿಕೆಯನ್ನು ಕೈಬಿಡಬೇಕು. ಸಾರ್ವಜನಿಕ ವಲಯವನ್ನು ದೃಢಗೊಳಿಸಬೇಕು. ಕರ್ನಾಟಕದಲ್ಲಿನ ಭದ್ರಾವತಿಯಲ್ಲಿರುವ ಶ್ರೀ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯನ್ನು ಮುಚ್ಚುವ ತೀರ್ಮಾನವನ್ನು ಹಿಂದಕ್ಕೆ ಪಡೆದು ಕಾರ್ಖಾನೆಯನ್ನು ಉಳಿಸಬೇಕು. ಬಿಇಎಂಎಲ್ ಒಳಗೊಂಡ ಯಾವುದೆ ಸಾರ್ವಜನಿಕ ಉದ್ಧಿಮೆಗಳ ಶೇರು ಮಾರಾಟವನ್ನು ಕೂಡಲೇ ನಿಲ್ಲಿಸ ಬೇಕು.
೪. ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸರ್ಕಾರಿ ಯೋಜನೆಗಳಲ್ಲಿ ಕೆಲಸಮಾಡುವ ಜನರನ್ನು ಭಾರತ ಕಾರ್ಮಿಕ ಸಮ್ಮೇಳದ ತೀರ್ಮಾನದಂತೆ ಕಾರ್ಮಿಕರೆಂದು ಪರಿಗಣಿಸಬೇಕು. ಕನಿಷ್ಟ ವೇತನ ಹಾಗು ಇತರೆ ಸೇವಾ ಸೌಲಭ್ಯಗಳನ್ನು ನೀಡಬೇಕು. ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ಐಸಿಡಿಎಸ್ ಯೋಜನೆಯನ್ನು ಬಲಪಡಿಸಬೇಕು. ಸರ್ಕಾರದ ಅನುದಾನವನ್ನು ಹೆಚ್ಚು ಮಾಡಬೇಕು.
ರೈತರು ಮತ್ತು ಕೃಷಿ ಕೂಲಿಕಾರರ ಪ್ರಮುಖ ಬೇಡಿಕೆಗಳು
೫. ನೆರೆ ಸಂತ್ರಸ್ಥರ ಮನೆ, ಹೊಲ, ಗದ್ದೆ, ಬದುಕನ್ನು ಕಟ್ಟಿ ಕೊಡಲು ಕೇಂದ್ರ, ರಾಜ್ಯ ಸರ್ಕಾರಗಳು ಕೂಡಲೇ ಮುಂದಾಗಬೇಕು:
ಭೀಕರ ನೆರೆ, ರಾಜ್ಯದ ಬಹು ಭಾಗದ ರೈತರು, ಕೂಲಿಕಾರರು ಇತರರ ಬದುಕನ್ನು ದ್ವಂಸ ಮಾಡಿದೆ. ಅಪಾರ ಆಸ್ತಿ ಪಾಸ್ತಿಗಳು, ಪ್ರಾಣ ಹಾನಿಯು ಉಂಟಾಗಿದೆ. ತಮ್ಮ ಮನೆ, ಹೊಲ, ಗದ್ದೆಗಳು ಜೊತೆಗೆ ಇಡೀ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇಂತಹ ಗಂಭೀರ ನೆರೆಯ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ ತೋರಿಸುತ್ತಿದೆ. ಇನ್ನೂ ರಾಜ್ಯದಲ್ಲಿ ‘ಸರ್ಕಾರ’ವೇ ಇಲ್ಲ ಎನ್ನುವ ಸ್ಥಿತಿಯು ಸಂತ್ರಸ್ಥರ ಬದುಕನ್ನು ಮತ್ತಷ್ಟು ಶೋಚನೀಯವನ್ನಾಗಿಸಿದೆ.
ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಕೂಡಲೇ ಪ್ರಧಾನಮಂತ್ರಿಗಳು ರಾಜ್ಯಕ್ಕೆ ಭೆಟಿ ನೀಡಬೇಕು. ಮೊದಲ ಕಂತಾಗಿ ಕನಿಷ್ಠ ೧೦,೦೦೦ ಕೋಟಿ ರೂ. ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಬೇಕು. ಪ್ರಾಣವನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ, ಸತ್ತ ಜಾನುವಾರುಗಳಿಗೆ ಪರಿಹಾರ, ಮನೆ ನಿರ್ಮಾಣ, ಹೊಲ, ಗದ್ದೆಗಳನ್ನು ಮೊದಲಿನ ಸ್ಥಿತಿಗೆ ತರಲು ಹಣಕಾಸಿನ ಪೂರ್ಣ ಸಹಾಯ.
ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಸಾಲ ಮನ್ನಾ ಇತ್ಯಾದಿ ಪರಿಹಾರ ಕಾರ್ಯಕ್ರಮಗಳ ಜೊತೆಗೆ ಮುಂದೆ ಇಂತಹ ಸಂದರ್ಭಗಳನ್ನು ಎದುರಿಸಲು ಅಗತ್ಯವಿರುವ ದೀರ್ಘವಾದ ಯೋಜನೆಗಳನ್ನು ರೂಪಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಪ್ರಾಣ ಹಾನಿ ಇತ್ಯಾದಿ ಸಂತ್ರಸ್ಥ ಫಲಾನಿಭವಿಗಳನ್ನು ಪತ್ತೆ ಮಾಡುವುದು ಹಾಗು ‘ಪರಿಹಾರ’ಗಳನ್ನು ವಿತರಣೆ ಮಾಡುವ ಕೆಲಸವನ್ನು ಸಮರ್ಥವಾಗಿ ಮಾಡಲು ತಳ ಮಟ್ಟದಲ್ಲಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಉಸ್ತುವಾರಿ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸುತ್ತೇವೆ.
೬. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕಾನೂನು:-
೨೦೨೨ ಕ್ಕೆ ದೇಶದ ‘ಸ್ವಾತಂತ್ರ್ಯ’ಕ್ಕೆ ೭೫ ವರ್ಷಗಳು ತುಂಬುವ ಸಂದರ್ಭಕ್ಕೆ ‘ರೈತರ ಆದಾಯ ದ್ವಿಗುಣ’ಗೊಳಿಸುವ ಘೋಷಣೆಯನ್ನು ನೀಡಿರುವ ಕೇಂದ್ರ ಸರ್ಕಾರ, ವಿಪರೀತ ದುಬಾರಿಯಾದ ಬೀಜ, ಗೊಬ್ಬರ, ಡಿಸೇಲ್ ಇತ್ಯಾದಿ ಕೃಷಿ ಲಾಗುವಾಡಿಗಳ ದರಗಳನ್ನು ಕಡಿತ ಮಾಡುವ ಯಾವುದೇ ಸೂಚನೆಗಳಿಲ್ಲ ‘ಉತ್ಪಾದನೆ ಮತ್ತು ಉತ್ಪಾದಕತೆ’ಯನ್ನು ಹೆಚ್ಚಿಸಲು ನಿರ್ಧಿಷ್ಟ ಕಾರ್ಯಕ್ರಮಗಳನ್ನು ನೀಡುತ್ತಿಲ್ಲ.
ಇನ್ನೂ ಮುಖ್ಯವಾಗಿ ಉತ್ಪಾದನಾ ವೆಚ್ಚದ ಮೇಲೆ ಶೇ. ೫೦ ರಷ್ಟು ಲಾಭವನ್ನು ಸೇರಿಸಿ, ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆನ್ನುವ ಡಾ|| ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕಾಯ್ದೆಗೆ ಸುತಾರಾಂ ಸಿದ್ಧವಿಲ್ಲ. ಆದರೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಘೋಷಣೆಯ ಮೂಲಕ ರೈತರನ್ನು ಮತ್ತೆ ಮೋಸ ಮಾಡಲು ಹೊರಟಿದೆ. ಈ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ ಮಾಡುವ ಕಾನೂನನ್ನು ರೂಪಿಸಲೇಬೇಕೆಂದು ಒತ್ತಾಯವನ್ನು ತರಬೇಕಿದೆ.
೭. ‘ಋಣ ಮುಕ್ತ ಕಾಯ್ದೆ’ಗಾಗಿ:-
ರಾಜ್ಯದಲ್ಲಿ ಶೇ. ೮೫ ಕ್ಕಿಂತ ಹೆಚ್ಚಿನ ರೈತರು, ಸಣ್ಣ, ಅತಿ ಸಣ್ಣ ರೈತರು ಮತ್ತು ಒಂದು ಕೋಟಿಯಷ್ಟಿರುವ ಕೃಷಿ ಕೂಲಿಕಾರರಿಗೆ ಬಹುತೇಕ ಬ್ಯಾಂಕ್ ಸಾಲಗಳು ಸಿಗುತ್ತಿಲ್ಲ ಇವರೆಲ್ಲ ಖಾಸಗಿ ಸಾಲದ ಮೇಲೆ ಅವಲಂಬನೆಯಾಗಿರುವ ಸನ್ನಿವೇಶವಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಕೃಷಿ ಕೂಲಿಕಾರರು ಮತ್ತು ರೈತರಿಗೆ ಅಗತ್ಯವಿರುವಷ್ಟು ಬ್ಯಾಂಕ್ ಸಾಲ ನೀಡಿಕೆ, ವಿಶೇಷ ಸಂದರ್ಭಗಳಲ್ಲಿ ಬಡ್ಡಿ ಮನ್ನಾ, ಸಾಲ ಮನ್ನಾ ಮಾಡುವ ಶಾಶ್ವತ ವ್ಯವಸ್ಥೆಯಾಗಿ ‘ಋಣ ಮುಕ್ತ ಕಾಯ್ದೆ’ ಯನ್ನು ಜಾರಿ ಮಾಡಬೇಕು. ಒಂದು ಬಾರಿ ಪರಿಹಾರವಾಗಿ ಎಲ್ಲಾ ಕೃಷಿ ಕೂಲಿಕಾರರು ಮತ್ತು ರೈತರ ಸಂಪುರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸುತ್ತದೆ.
೮. ‘ಪ್ರವಾಹ’ ಮತ್ತು ‘ಬರ’ ಗಾಲದ ಹಿನ್ನೆಲೆಯಲ್ಲಿ ಉದ್ಯೋಗ ಖಾತರಿಯ ವ್ಯಾಪಕ ಜಾರಿಗೆ ಆಗ್ರಹ :-
ಹಿಂದೆಂದೂ ಕಂಡರಿಯದ ಪ್ರವಾಹ ರಾಜ್ಯದ ಸುಮಾರು ೧೦೦ ತಾಲ್ಲೂಕಗಳಲ್ಲಿ ಜನರ ಬದುಕನ್ನು ದ್ವಂಸ ಮಾಡಿದೆ. ಇನ್ನುಳಿದ ಸುಮಾರು ೪೦ ತಾಲ್ಲೂಕಗಳಲ್ಲಿ ‘ಬರಗಾಲ’ದ ಛಾಯೆ ಗಟ್ಟಿಯಾಗಿದೆ. ಪ್ರವಾಹದಿಂದ ಕೊಚ್ಚಿಕೊಂಡು ಹೋಗಿರುವ ಮನೆ, ಹೊಲ, ಗದ್ದೆ ಇತ್ಯಾದಿಗಳನ್ನು ಪುನರ್ ನಿರ್ಮಾಣ ಮಾಡಲು ಹಾಗು ಬರ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ‘ಉದ್ಯೋಗ ಖಾತರಿ ಯೋಜನೆ’ಗೆ ಇರುವ ಕೆಲಸದ ದಿನಗಳ ಮಿತಿಯನ್ನು ತೆಗೆದು ಹಾಕಿ, ಕೂಲಿಯನ್ನು ೬೦೦ ರೂ. ಗಳಿಗೆ ಏರಿಸಬೇಕು ಹಾಗೂ ಇದಕ್ಕೆ ವಿಶೇಷವಾಗಿ ಹೆಚ್ಚಿನ ಅನುದಾನವನ್ನು ನೀಡಿ ವ್ಯಾಪಕವಾಗಿ ಜಾರಿ ಮಾಡಬೇಕೆಂದು ಸೆಪ್ಟೆಂಬರ್ ೫, ೨೦೧೯ ರಂದು ಕರ್ನಾಟಕ ರಾಜ್ಯಾದಂತ ನಡೆಯುತ್ತಿರುವ ಹೋರಾಟದ ಭಾಗವಾಗಿ ಬೆಳಗಾವಿ ಜಿಲ್ಲೆಯ ರೈತ ಕಾರ್ಮಿಕರ ಜಂಟಿ ಹೋರಾಟ ಸಮಿತಿ ಆಗ್ರಹಿಸುತ್ತದೆ.
ಮಾರುತಿ ಮಾನಪಡೆ, ವ್ಹಿ.ಪಿ. ಕುಲಕರ್ಣಿ, ಜಿ.ಎಂ. ಜೈನೆಖಾನ್, ಎಲ್.ಎಸ್. ನಾಯಕ, ಶಿವಮೂರ್ತಿ ಜಿಂದ್ರಾಳ, ನಾಗೇಶ ಅಸಲ್ಲನವರ, ಕಾಶೀಮಸಾಬ ನೇಸರಗಿ ಮೊದಲಾದವರು ನೇತೃತ್ವ ವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ