
ಪ್ರಗತಿವಾಹಿನಿ ಸುದ್ದಿ, ಸಾಂಬ್ರಾ -ಶಿಂದೊಳ್ಳಿಯಿಂದ ಸಾರಿಗೆ ನಗರ, ಶ್ರೀರಾಮಕಾಲನಿ ಗೋಕುಲ ನಗರ, ಮಹಾಲಕ್ಷ್ಮೀಪುರಂ ಮಾರ್ಗವಾಗಿ ರಾಜ್ಯ ಹೆದ್ದಾರಿ ತಲುಪುವ ರಸ್ತೆಯಲ್ಲಿ ಸೋಮವಾರ ಶಾಲೆಗೆ ಮಕ್ಕಳನ್ನು ಕೂಡ್ರಿಸಿಕೊಂಡು ಹೋಗುವಾಗ ಕೂದಲೆಳೆಯ ಅಂತರದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.

ಭಾರಿ ಮಳೆಯ ಕಾರಣ ಈ ಕಚ್ಚಾ ರಸ್ತೆಯ ಅವ್ಯವಸ್ಥೆಯಿಂದಾಗಿಯೇ ವಾಹನ ರಸ್ತೆಯ ಬದಿಗೆ ಚಲಿಸಿ ಮುಗ್ಗರಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸ್ವಲ್ಪದರಲ್ಲೇ ವಾಹನ ಪಲ್ಟಿಯಾಗುವುದು ತಪ್ಪಿದೆ.
ಈ ಭಾಗದ ಪ್ರಮುಖ ರಸ್ತೆಯಾಗಿರುವ ಇದನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ. ಈ ಬಗ್ಗೆ ಸ್ಥಳೀಯ ಜನತೆ ಹಲವಾರು ಸಲ ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಾ ಬಂದಿದ್ದರು. ಆದರೆ, ಜನರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸದೇ ಇರುವುದರಿಂದ ಇಲ್ಲಿ ಮೇಲಿಂದ ಮೇಲೆ ಇಂತಹ ಅನಾಹುತ ನಡೆಯುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಹೆಚ್ಚಿನ ಮಳೆ ಹಾಗೂ ರಸ್ತೆಯ ಅವ್ಯವಸ್ಥೆಯಿಂದಾಗಿ ಕಾಲ್ನಡಿಗೆಯಲ್ಲಿ ಹಾಗೂ ವಾಹನದಲ್ಲಿ ಸಂಚರಿಸುವ ಜನರ ಪಾಡು ಹೇಳತೀರದು. ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡಂತಿದ್ದರೂ ಇಲ್ಲಿನ ಬಹುತೇಕ ರಸ್ತೆಯ ಸ್ಥಿತಿ ಇದೇ ಅವಸ್ಥೆಯಲ್ಲಿವೆ. ಈ ಭಾಗದ ರಸ್ತೆಗಳ ಮೇಲೆ ಆಡಳಿತದ ನಿರ್ಲಕ್ಷ್ಯವಾದರೂ ಏಕೆ ? ಇಲ್ಲಿನ ಜನತೆ ಮಾಡಿರುವ ತಪ್ಪಾದರೂ ಏನು ಎಂದು ದೂರಿದರು.
ಹಣ ಮಂಜೂರಾಗಿದ್ದರೂ ಕುಂಟುತ್ತಾ ಸಾಗಿರುವ ಕಾಮಗಾರಿಗೆ ಇನ್ನಷ್ಟು ವೇಗ ನೀಡಬೇಕು. ಈ ದಿಸೆಯಲ್ಲಿ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಆಗ್ರಹಿಸಿರುವ ನಾಗರಿಕರು ಮೇಲಿಂದ ಮೇಲೆ ಇಲ್ಲಿ ಆಗುತ್ತಿರುವ ಅಪಘಾತಗಳಿಗೆ ಕೊನೆ ಹಾಡಲು ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.