ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನ ಸಭೆಯ ಉಪಾಧ್ಯಕ್ಷ ಆನಂದ ಮಾಮನಿಯವರು ಶನಿವಾರ ರಾತ್ರಿ ನಿಧನರಾಗಿದ್ದು, ಅಂದೇ ಅವರು ಕಿತ್ತೂರು ಉತ್ಸವಕ್ಕೆ ಶುಭ ಕೋರಿ ಪತ್ರ ಬರೆದಿದ್ದರು.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್ ಅವರಿಗೆ ಪತ್ರ ಬರೆದು ಶುಭ ಹಾರೈಸಿದ್ದ ಮಾಮನಿ,
ಅ. 23 ರಿಂದ 25 ರವರೆಗೆ ಐತಿಹಾಸಿಕ ಕಿತ್ತೂರು ನಾಡಿನಲ್ಲಿ ನಡೆಯುತ್ತಿರುವ ವೀರರಾಣಿ ಕಿತ್ತೂರು ಚನ್ನಮ್ಮ ಉತ್ಸವಕ್ಕೆ ತಮ್ಮ ಅಧ್ಯಕ್ಷತೆಯ ಉತ್ಸವ ಸಮಿತಿಯಿಂದ ಅಮಂತ್ರಣ ಬಂದು ತಲುಪಿದೆ. ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಹಾಗೂ ಬ್ರಿಟಿಷರಿಂದ ಕನ್ನಡ ನಾಡಿನ ರಕ್ಷಣೆಗಾಗಿ ದಿಟ್ಟ ಹೋರಾಟ ಮಾಡಿದ ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವದ ಸವಿನೆನಪಿಗಾಗಿ ಕರ್ನಾಟಕ ಸರ್ಕಾರ ಕಿತ್ತೂರು ಉತ್ಸವ ಮಾಡುತ್ತಿರುವುದು ಅರ್ಥಪೂರ್ಣ ಹಾಗೂ ಶ್ಲಾಘನೀಯವಾಗಿದೆ. ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಾಡಿನ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಾಗೂ ನಾಡಿನ ಸಾಂಸ್ಕೃತಿಕ ದಿಗ್ಗಜರ ನಮ್ಮುಖದಲ್ಲಿ ನಡೆಯುತ್ತಿರುವುದು ಅತೀವ ಸಂತೋಷವನ್ನುಂಟು ಮಾಡಿದೆ.
ಈ ವೈಭವದ ಉತ್ಸವಕ್ಕೆ ನಾನು ಅನಾರೋಗ್ಯದ ನಿಮಿತ್ಯ ಭಾಗವಹಿಸಲು ಸಾಧ್ಯವಾಗುತ್ತಿಲ್ಲ, ಉತ್ಸವದ ಕಾರ್ಯಕ್ರಮಗಳು ಸಾಂಘವಾಗಿ ಹಾಗೂ ವಿಜೃಂಭಣೆಯಿಂದ ನಡೆಯಲೆಂದು ಶುಭ ಕೋರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದರು.
ಶುಭ ಕೋರಿ ಪತ್ರ ಬರೆದ ದಿನವೇ ರಾತ್ರಿ ವೇಳೆಗೆ ಆನಂದ ಮಾಮನಿ ನಿಧನರಾಗಿದ್ದು, ಜಿಲ್ಲೆಯಾದ್ಯಂತ ಜನ ಶೋಕದಲ್ಲಿ ಮುಳುಗಿದ್ದಾರೆ. ಆನಂದ ಮಾಮನಿ ನಿಧನದ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವ ಒಂದು ದಿನ ಮುಂದೂಡಲ್ಪಟ್ಟಿದ್ದು, ಅ. 24 ರಂದು ಸಂಜೆ 6 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
https://pragati.taskdun.com/politics/kalaburgijanasankalpa-samaveshapostpone/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ