ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಮಸೂದೆಗೆ ಅಂಗೀಕಾರ

ಪ್ರಗತಿವಾಹಿನಿ ಸುದ್ದಿ; ಅಮರಾವತಿ: ರೈತರು ಹಾಗೂ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ರಚನೆಗೆ ಅವಕಾಶ ನೀಡುವ ‘ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲ ವಲಯಗಳ ಸರ್ವಾಂಗೀಣ ಅಭಿವೃದ್ಧಿ ವಿಧೇಯಕ 2020’ ಮಸೂದೆಗೆ ಅಂಗೀಕಾರ ಪಡೆಯಲಾಗಿದೆ.

ಆಂಧ್ರ ವಿಧಾನಸಭೆಯಲ್ಲಿ ಹಣಕಾಸು ಸಚಿವ ಬುಗ್ಗಣ ರಾಜೇಂದ್ರನಾಥ್‌ ಮಾಸೂದೆ ಮಂಡಿಸಿದ್ದು ತಡರಾತ್ರಿ ಮಾಸೂದೆಗೆ ಒಪ್ಪಿಗೆ ಮುದ್ರೆ ದೊರೆತಿದೆ. ಈ ಮೂಲಕ ಆಂಧ್ರದಲ್ಲಿ ಅಮರಾವತಿ, ವಿಶಾಖಪಟ್ಟಣಂ ಮತ್ತು ಕರ್ನೂಲ್ ನಗರಗಳು ರಾಜಧಾನಿಯಾಗಿ ಆಸ್ತಿತ್ವಕ್ಕೆ ಬರಲಿದೆ.

ಬಿಲ್ ಪಾಸ್ ಆದ ಬಳಿಕ ಮಾತನಾಡಿದ ಆಂಧ್ರ ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿ, ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ಇದೇ ವೇಳೆ, ಅಮರಾವತಿ ಪ್ರದೇಶದ ಅಭಿವೃದ್ಧಿಯನ್ನು ಕಡೆಗಣಿಸುವುದಿಲ್ಲ, ರಾಜಧಾನಿ ಪಟ್ಟವನ್ನೂ ಕಿತ್ತುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು. ಅಮರಾವತಿಯಲ್ಲಿ ಶಾಸಕಾಂಗ ವಿಧಾನಸಭೆ ಇರಲಿದೆ. ಅಲ್ಲಿಯೇ ಎಲ್ಲಾ ಶಾಸನಗಳು ರೂಪುಗೊಳ್ಳಲಿವೆ. ಇದರ ಜೊತೆಗೆ ಇನ್ನೆರಡು ರಾಜಧಾನಿಯನ್ನು ಸೇರಿಸಿದ್ಧೇವೆ. ವಿಶಾಖಪಟ್ಟಣಂ ಕಾರ್ಯಾಂಗ ರಾಜಧಾನಿಯಾದರೆ, ಕರ್ನೂಲು ನ್ಯಾಯಾಂಗ ರಾಜಧಾನಿಯಾಗಲಿದೆ ಎಂದು ತಿಳಿಸಿದರು.

ರಾಯಲಸೀಮೆ ಪ್ರದೇಶದಲ್ಲಿ ಕುಡಿಯಲು ಮತ್ತು ಕೃಷಿಗೆ ನೀರು ಒದಗಿಸಲು ವಿವಿಧ ನೀರಾವರಿ ಯೋಜನೆಗಳಿಗೆ 30 ಸಾವಿರ ಕೋಟಿ ರೂ ಅಗತ್ಯವಿದೆ. ಉತ್ತಮ ಆಸ್ಪತ್ರೆ ಮತ್ತು ಶಿಕ್ಷಣ ವ್ಯವಸ್ಥೆಗೆ 26 ಸಾವಿರ ಕೋಟಿ ರೂ ಬೇಕಾಗುತ್ತದೆ. ಹಾಗೆಯೇ, ಪ್ರತಿಯೊಂದು ಜಿಲ್ಲೆಗಳಲ್ಲಿ ಮೂಲಭೂತ ಸವಲತ್ತುಗಳನ್ನು ಒದಗಿಸಲು ಪ್ರತಿಯೊಂದು ನಗರ ಸಂಸ್ಥೆಗೂ 500 ಕೋಟಿ ರೂ ಬೇಕಾಗುತ್ತದೆ ಎಂದು ಆಂಧ್ರ ಸಿಎಂ ವಿವರಿಸಿದರು. ಅಮರಾವತಿಗೆ ಮಾಡುವ ವ್ಯಯದಲ್ಲಿ ಶೇ. 10ರಷ್ಟು ಹಣದಿಂದ ವಿಶಾಖಪಟ್ಟಣ ಅಭಿವೃದ್ಧಿ ಪಡಿಸಬಹುದು. ವೈಜಾಗ್ ಈಗಾಗಲೇ ರಾಜ್ಯದ ಅಗ್ರ ನಗರವಾಗಿದೆ. ಹೀಗಾಗಿ, ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ಸುಲಭ ಎಂದರು.

ಅಮರಾವತಿ ನಗರ ಅಭಿವೃದ್ಧಿಗಾಗಿ ಭೂಮಿ ನೀಡಿದ ರೈತರಿಗೆ ಕೊಡಲಾಗುವ ಪರಿಹಾರ ಹಣದ ಅವಧಿಯನ್ನು 10 ವರ್ಷದಿಂದ 15 ವರ್ಷಕ್ಕೆ ಏರಿಸಿದ್ದಾರೆ. ಹಾಗೆಯೇ ಪರಿಹಾರ ಮೊತ್ತವನ್ನೂ ಏರಿಕೆ ಮಾಡಿದ್ಧಾರೆ. “29 ಗ್ರಾಮಗಳಲ್ಲಿ ಜಮೀನು ಇಲ್ಲದಿರುವ 21 ಸಾವಿರ ಕುಟುಂಬಗಳಿಗೆ ಈಗ ನೀಡುವ 2,500 ರೂ ಪರಿಹಾರ ಹಣವನ್ನು 5,000 ರೂಪಾಯಿಗೆ ಏರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button