
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ರಾಜಕೀಯ ರ್ಯಾಲಿಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿ ಹಲವರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಆಂಧ್ರಪ್ರದೇಶದ ಶ್ರೀಕಾಕುಳಂ ದೇವಸ್ಥಾನದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದೆ.
ಶ್ರೀಕಾಕುಳಂನ ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ. ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಏಕಾದಶಿ ಹಿನ್ನೆಲೆಯಲ್ಲಿ ಶ್ರೀಕಾಕುಳಂ ವೆಂಕಟೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಶ್ರೀಕಾಕುಳಂ ನ ಕಾಶಿಬಗ್ಗು ವೆಂಕಟೇಶ್ವರ ದೇವಸ್ಥಾನ ಇನ್ನೂ ನಿರ್ಮಾಣಹಂತದಲ್ಲಿದ್ದು, ದೇಗುಲ ನಿರ್ಮಾಣದ ಬಳಿಕ ಮೊದಲ ಕಾರ್ತಿಕ ಏಕಾದಶಿ ಹಿನ್ನೆಲೆಯಲ್ಲಿ ಇಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿರೀಕ್ಷೆಗೂ ಮೀರಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿ ಹೋಗುವಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.



