*ಅಂಗಡಿ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಿಂದ ಯು.ಆರ್.ರಾವ್ ಉಪಗ್ರಹ ಕೇಂದ್ರಕ್ಕೆ ಭೇಟಿ*

ಪ್ರಗತಿವಾಹಿನಿ ಸುದ್ದಿ: “ನಕ್ಷತ್ರಗಳ ಜೊತೆ ಮಾತನಾಡುವ ನಮ್ಮ ವಿಜ್ಞಾನ; ಇಸ್ರೋ ಹೆಸರು ಕೇಳಿದರೆ ಹೆಚ್ಚುತ್ತದೆ ದೇಶಾಭಿಮಾನ” ಎನ್ನುವಂತೆ ಅಂಗಡಿ ಅಂತರಾಷ್ಟ್ರೀಯ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನಾಂಕ 20/02/2026 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಬಗ್ಗೆ ಪ್ರಾಯೋಗಿಕ ಮತ್ತು ವೈಜ್ಞಾನಿಕ ಜ್ಞಾನವನ್ನು ಪಡೆದುಕೊಳ್ಳುವ ಉದ್ದೇಶದಿಂದ ಬೆಂಗಳೂರಿನ ಯು . ಆರ್. ರಾವ್ ಉಪಗ್ರಹ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ ನೀಡಿದರು.
ಈ ಭೇಟಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳ ಕುರಿತು ಆಸಕ್ತಿಯನ್ನು ಹೆಚ್ಚಿಸಿತು . ಅಲ್ಲದೆ ಬಾಹ್ಯಾಕಾಶ ಸಂಶೋಧನೆಯ ಮಹತ್ವವನ್ನು ತಿಳಿದುಕೊಳ್ಳುವುದು,ಉಪಗ್ರಹಗಳು ಮತ್ತು ಉಡಾವಣೆ ತಂತ್ರಜ್ಞಾನಗಳ ಬಗ್ಗೆ ಅರಿವು ಪಡೆಯುವುದು, ಯು . ಆರ್. ರಾವ್ ಕೇಂದ್ರದ ವಿಜ್ಞಾನಿಗಳ ಕಾರ್ಯವಿಧಾನವನ್ನು ಸಮೀಪದಿಂದ ತಿಳಿಯುವುದು ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಉತ್ಸಾಹ ಬೆಳೆಸುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ಕೇಂದ್ರದ ಅಧಿಕಾರಿಗಳು ಸಂಸ್ಥೆಯ ಇತಿಹಾಸ, ಸಾಧನೆಗಳು ಮತ್ತು ಗುರಿಗಳ ಬಗ್ಗೆ ವಿವರವಾಗಿ ತಿಳಿಸಿದರು. ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪ್ರಗತಿ ಮತ್ತು ಮಹತ್ವದ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉಪಗ್ರಹಗಳ ಮಾದರಿಗಳು, ರಾಕೆಟ್ ತಂತ್ರಜ್ಞಾನ ಸಂವಹನ ಮತ್ತು ಭೂ ವೀಕ್ಷಣಾ ಉಪಗ್ರಹಗಳ ಬಳಕೆಇವುಗಳ ಕುರಿತು ತಿಳಿದುಕೊಂಡರು.
ಯು . ಆರ್. ರಾವ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವಿಜ್ಞಾನಿ ಡಾ. ಉಮಾವತಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳನ್ನು ನೀಡಿದರು ಹಾಗೂ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ವೃತ್ತಿ ಆಯ್ಕೆ ಕುರಿತು ಮಾರ್ಗದರ್ಶನ ನೀಡಿದರು. ಬಾಹ್ಯಾಕಾಶಯಾನಗಳ ಕಾರ್ಯವಿಧಾನ, ಉಡಾವಣೆ ಪ್ರಕ್ರಿಯೆ ಹಾಗೂ ಉಪಗ್ರಹಗಳ ನಿಯಂತ್ರಣ ವ್ಯವಸ್ಥೆಯನ್ನು ಡೆಮೋ ಮೂಲಕ ವಿವರಿಸಲಾಯಿತು. ಈ ಕೇಂದ್ರಕ್ಕೆ ಭೇಟಿ ನೀಡಿದ ಅನುಭವ ನಮ್ಮ ಜೀವನದಲ್ಲಿ ಮರೆಯಲಾಗದ್ದು, ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡುವ ಆಸಕ್ತಿ ಮೂಡಿದೆ ಮತ್ತು ಪಠ್ಯ ಪುಸ್ತಕದಲ್ಲಿರುವ ವಿಷಯಗಳನ್ನು ನೇರವಾಗಿ ನೋಡಿದಂತಾಯಿತು. ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಹೇಳುವುದಾದರೆ 9ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬೆಂಗಳೂರಿನ ಯು . ಆರ್. ರಾವ್ ಕೇಂದ್ರಕ್ಕೆ ನೀಡಿದ ಈ ಶೈಕ್ಷಣಿಕ ಭೇಟಿ ಅತ್ಯಂತ ಉಪಯುಕ್ತ ಮತ್ತು ಪ್ರೇರಣಾದಾಯಕವಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕರಾದ ಭಾರತಿ ಪಾಟೀಲ್ , ಸಂಧ್ಯಾ ಶಾನಭಾಗ ಮತ್ತು ಕಿರಣ್ ದಳವಾಯಿ ಉಪಸ್ಥಿತರಿದ್ದರು.
ಈ ಭೇಟಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡಿ ಅವರ ಭವಿಷ್ಯದ ಗುರಿಗಳಿಗೆ ದಿಕ್ಕು ತೋರಿಸಿತು. ಈ ಶೈಕ್ಷಣಿಕ ಪ್ರವಾಸವು ಶಾಲೆಯ ನಿರ್ದೇಶಕರಾದ ಸ್ಪೂರ್ತಿ ಅಂಗಡಿ ಪಾಟೀಲ್ ರವರ ನೇತೃತ್ವದಲ್ಲಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಸಂಗೀತಾ ದೇಸಾಯಿರವರ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ನೆರವೇರಿತು.


