*ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೇ ಹೊಸ ಅಂದೋಲನ, ಹೊಸ ಪಕ್ಷ ಘೋಷಿಸಿದ ಅಣ್ಣಾಮಲೈ: ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ*

ಪ್ರಗತಿವಾಹಿನಿ ಸುದ್ದಿ: ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಪ್ರಾದೇಶಿಕ ರಾಜಕೀಯ ಪಕ್ಷದ ಸ್ಥಾಪನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಅವರ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ಗೆ ಬಂದ ಅಣ್ಣಾಮಲೈ, ತಮ್ಮ ಮುಂಬರುವ ರಾಜಕೀಯ ನಡೆ ಹಾಗೂ ಹೊಸ ಆಂದೋಲನದ ಬಗ್ಗೆ ತಿಳಿಸಿದ್ದಾರೆ. ತಮ್ಮ ಹೊಸ ರಾಜಕೀಯ ಆಂದೋಲನಕ್ಕೆ ನಾವು ಜನರು ಎಂದು ಹೆಸರಿಡಲಾಗುವುದು ಎಂದು ಪ್ರಕಟಿಸಿದ ಅವರು, ಈ ವೇದಿಕೆಯು ಸಂಪೂರ್ಣವಾಗಿ ನಾಗರಿಕರ ಕೇಂದ್ರಿತವಾಗಿರಲಿದೆ ಎಂದಿದ್ದಾರೆ.
ಕಳೆದ 18 ತಿಂಗಳುಗಳಿಂದ ಹಲವು ವೈಚಾರಿಕ ಮತ್ತು ಕಾರ್ಯವೈಖರಿಯ ವಿಚಾರಗಳಲ್ಲಿ ನನಗೆ ಬಿಜೆಪಿ ನಾಯಕತ್ವದ ಜೊತೆಗೆ ಭಿನ್ನಾಭಿಪ್ರಾಯಗಳಿದ್ದವು. ನಾನು 2025ರ ಡಿಸೆಂಬರ್‌ನಲ್ಲೇ ಪಕ್ಷ ಬಿಡುವ ಇಚ್ಛೆಯನ್ನು ಹೈಕಮಾಂಡ್‌ಗೆ ತಿಳಿಸಿದ್ದೆ. ಆದರೆ ಚುನಾವಣೆ ಮುಗಿಯುವವರೆಗೆ ಜವಾಬ್ದಾರಿ ನಿಭಾಯಿಸುವಂತೆ ಅವರು ಕೋರಿದ್ದರಿಂದ ನಾನು ಮುಂದುವರಿದಿದ್ದೆ ಎಂದು ತಿಳಿಸಿದರು.
ಇಂದಿನಿಂದ ಹೊಸ ಪ್ರಯಾಣ ಪ್ರಾರಂಭವಾಗುತ್ತದೆ. ನಾನು ಹೊಸ ರಾಜಕೀಯ ಆಂದೋಲನ ಪ್ರಾರಂಭಿಸುತ್ತಿದ್ದೇನೆ ಮತ್ತು ಈ ಪ್ರಯತ್ನದಲ್ಲಿ ನಿಮ್ಮೆಲ್ಲರ ಬೆಂಬಲವನ್ನು ನಾನು ಬಯಸುತ್ತೇನೆ. ಈ ಆಂದೋಲದಲ್ಲಿ ನಾಗರಿಕರನ್ನು ನೇರವಾಗಿ ತೊಡಗಿಸಿಕೊಳ್ಳುವುದು ಮತ್ತು ಸಾಮಾನ್ಯ ಜನರ ಆಕಾಂಕ್ಷೆಗಳು ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುವ ವೇದಿಕೆಯನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದರು.
2009 ರಲ್ಲಿ ಡಿಎಂಡಿಕೆಯಲ್ಲಿ ಇಂಟರ್ನ್‌ಶಿಪ್ ಮಾಡುವ ಮೂಲಕ ತಮ್ಮ ರಾಜಕೀಯ ಅನುಭವವನ್ನು ಪ್ರಾರಂಭಿಸಿದ ನಂತರ 2020 ರಲ್ಲಿ ಬಿಜೆಪಿಗೆ ಸೇರಿದ್ದಾಗಿ ನೆನಪಿಸಿಕೊಂಡರು. ನನ್ನದು ಸುಲಭದ ರಾಜಕೀಯ ಪ್ರಯಾಣವಲ್ಲ. ನಾನು 2009 ರಲ್ಲಿ ಡಿಎಂಡಿಕೆ ಜೊತೆ ತರಬೇತಿ ಪಡೆದೆ, 2020 ರಲ್ಲಿ ಬಿಜೆಪಿ ಸೇರಿದೆ, ಮತ್ತು ಇಂದು ನಾನು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಹೇಳಿದರು. ಇದೇ ವೇಳೆ 2031ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.




