ಪ್ರಗತಿವಾಹಿನಿ ಸುದ್ದಿ, ಲಕ್ನೋ: ಅಂಧಶ್ರದ್ಧೆಗೆ ತಮ್ಮದೇ ಕುಟುಂಬದ 10 ವರ್ಷದ ಬಾಲಕನನ್ನು ಬಲಿ ನೀಡಿದ ಘಟನೆಯೊಂದು ಆಧುನಿಕ ಜಗತ್ತು ತಲೆತಗ್ಗಿಸುವಂತೆ ಮಾಡಿದೆ.
ಪಾರ್ಸಾ ಗ್ರಾಮದ ವಿವೇಕ ಕೃಷ್ಣವರ್ಮಾ ಬಲಿಯಾದ ಬಾಲಕ. ವಿವೇಕ ಕಳೆದ ಗುರುವಾರ ನಾಪತ್ತೆಯಾಗಿದ್ದ. ಕುಟುಂಬದ ಸದಸ್ಯರು ತೀವ್ರ ಹುಡುಕಾಟ ನಡೆಸಿದಾಗ ಅದೇ ದಿನ ಗದ್ದೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ವಿವೇಕನ ಶವ ಪತ್ತೆಯಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ವರ್ಮಾ ಕುಟುಂಬದವನೇ ಆದ ಅನೂಪ್ ಎಂಬಾತನ ಮೇಲೆ ಸಂದೇಹಗೊಂಡು ವಿಚಾರಣೆಗೆ ಗುರಿಪಡಿಸಿದಾಗ ಈತ ವಾಮಾಚಾರಕ್ಕಾಗಿ ನರಬಲಿಯ ಮೊರೆ ಹೋಗಿರುವುದು ತಿಳಿದುಬಂದಿದೆ.
ಅನೂಪ್ ಗೆ 2 ವರ್ಷದ ಮಗುವಿದ್ದು ಮಾನಸಿಕ ಅಸ್ವಸ್ಥವಾಗಿದೆ. ಅದಕ್ಕಾಗಿ ಎಲ್ಲ ವೈದ್ಯಕೀಯ ಚಿಕಿತ್ಸೆಗಳ ಮೊರೆ ಹೋಗಿ ಸೋತ ಅನೂಪ್ ಮಂತ್ರವಾದಿಯೊಬ್ಬನ ಮೊರೆ ಹೋಗಿದ್ದಾನೆ. ಇದಕ್ಕೆ ಪರಿಹಾರ ಹೇಳಿದ ಮಂತ್ರವಾದಿ ನರಬಲಿ ನೀಡುವಂತೆ ಸಲಹೆ ನೀಡಿದ್ದಾನೆ.
ಇದನ್ನು ನಂಬಿದ ಅನೂಪ್ ವಿವೇಕನ ಚಿಕ್ಕಪ್ಪ ಚಿಂತಾರಾಮ್ ಜೊತೆಗೆ ಸೇರಿ ಗುದ್ದಲಿಯಿಂದ ಹೊಡೆದು ವಿವೇಕನನ್ನು ಸಾಯಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಅನೂಪ್, ಚಿಂತಾರಾಮ ಹಾಗೂ ಇಂಥ ಅನಾಹುತಕಾರಿ ಸಲಹೆ ನೀಡಿದ ಮಂತ್ರವಾದಿಯನ್ನು ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ