HealthKannada NewsKarnataka NewsLatest

*ರಾಜ್ಯದ ಜನತೆಗೆ KMF ಮತ್ತೊಂದು ಶಾಕ್*: *ಮೊಸರಿನ ದರ ಮತ್ತೆ ಏರಿಕೆ, ನಾಳೆಯಿಂದಲೇ ಹೊಸ ಬೆಲೆ ಜಾರಿ*

ಪ್ರಗತಿವಾಹಿನಿ ಸುದ್ದಿ: ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಶುಕ್ರವಾರ ಆದೇಶ ಹೊರಡಿಸಿದೆ.

ಪರಿಷ್ಕೃತ ದರಗಳು ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ. ಅರ್ಧ ಲೀಟರ್ ಮೊಸರಿನ ದರ 28 ರೂ.ನಿಂದ 34 ರೂ.ಗೆ ಏರಿಕೆಯಾಗಿದೆ. ಒಂದು ಲೀಟರ್ ಮೊಸರಿನ ಬೆಲೆ 54 ರೂ.ನಿಂದ 68 ರೂ.ಗೆ ಹೆಚ್ಚಿಸಲಾಗಿದೆ.

ವಿವಿಧ ಮಾದರಿಯ ನಂದಿನಿ ಹಾಲಿನ ಪರಿಷ್ಕೃತ ದರಗಳು ಹೀಗಿವೆ:

ಟೋನ್ಡ್ ಹಾಲಿನ ದರ 46 ರೂ.ನಿಂದ 54 ರೂ.ಗೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲು 47 ರೂ.ನಿಂದ 56 ರೂ.ಗೆ, ಹೋಮೋಜಿನೈಸ್ಡ್ ಹಸುವಿನ ಹಾಲು 50 ರೂ.ನಿಂದ 58 ರೂ.ಗೆ ಹೆಚ್ಚಳವಾಗಿದೆ.

ಸ್ಪೆಷಲ್ ಟೋನ್ಡ್ ಹಾಲು ಮತ್ತು ಶುಭಂ ಹಾಲಿನ ದರ ತಲಾ 52 ರೂ.ನಿಂದ 64 ರೂ.ಗೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಶುಭಂ ಹಾಲಿನ ಬೆಲೆ 53 ರೂ.ನಿಂದ 65 ರೂ.ಗೆ ಹೆಚ್ಚಿಸಲಾಗಿದೆ.

500 ಗ್ರಾಂ ಮೊಸರಿನ ಪ್ಯಾಕೆಟ್ ಬೆಲೆ 28 ರೂ.ನಿಂದ 34 ರೂ.ಗೆ ಹಾಗೂ ಒಂದು ಕೆ.ಜಿ. ಮೊಸರಿನ ಪ್ಯಾಕೆಟ್ ಬೆಲೆ 54 ರೂ.ನಿಂದ 68 ರೂ.ಗೆ ಏರಿಕೆಯಾಗಿದೆ.

ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ರೈತರ ಹಿತಾಸಕ್ತಿಯನ್ನು ಪ್ರಮುಖ ಕಾರಣವಾಗಿ ಉಲ್ಲೇಖಿಸಿದೆ. ಕಳೆದ ಐದು ದಶಕಗಳಿಂದ ‘ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ’ ಎಂಬ ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಕೆಎಂಎಫ್, ರಾಜ್ಯದ ಲಕ್ಷಾಂತರ ಹೈನುಗಾರ ರೈತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಪ್ರಸ್ತುತ ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಸುಮಾರು 8.9 ಲಕ್ಷ ರೈತರು ಪ್ರತಿದಿನ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂ. ಪಾವತಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವರ್ಷ ಸಕಾಲದಲ್ಲಿ ಉತ್ತಮ ಮಳೆಯಾಗದ ಕಾರಣ ನೀರು ಮತ್ತು ಮೇವು ಕೊರತೆ ಎದುರಾಗಿದೆ. ಪಶುಗಳ ನಿರ್ವಹಣೆ, ಔಷಧೋಪಚಾರ ಹಾಗೂ ಮೇವು ಪೂರೈಕೆಯ ವೆಚ್ಚ ಹೆಚ್ಚಾಗಿರುವುದರಿಂದ ಹೈನುಗಾರಿಕೆ ಮುಂದುವರಿಸುವುದು ರೈತರಿಗೆ ಕಷ್ಟಕರವಾಗಿದೆ. ಹೀಗಾಗಿ ಹಾಲು ಖರೀದಿ ದರವನ್ನು ಪ್ರತಿ ಲೀಟರ್‌ಗೆ ಕನಿಷ್ಠ 10ರಿಂದ 12 ರೂ. ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಂದಿನಿ ಟೋನ್ಡ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ. ಪರಿಷ್ಕೃತ ಮೊತ್ತದಲ್ಲಿ 7 ರೂ.ಗಳನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ.

ಇದರ ಜೊತೆಗೆ ಹಾಲಿನ ಜಿಡ್ಡಿನಾಂಶದ (ಫ್ಯಾಟ್) ಪ್ರಮಾಣದ ಆಧಾರದ ಮೇಲೆ ನಂದಿನಿಯ ಎಲ್ಲ ಮಾದರಿಯ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನೂ ಪರಿಷ್ಕರಿಸಲಾಗಿದೆ. ನವೆಂಬರ್ 1ರಿಂದ ಗ್ರಾಹಕರು ಹೊಸ ದರ ಪಾವತಿಸಬೇಕಾಗುತ್ತದೆ.

Related Articles

Back to top button