*ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ VHP ಆಕ್ರೋಶ; ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಹಿಂಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬೆಳಗಾವಿ ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಭಾರತ ಹಿಂದೂ ರಾಷ್ಟ್ರವಾಗಿದ್ದು, ಇಲ್ಲಿ ಹಿಂದೂಗಳೊಡಣೆ ಅನ್ಯ ಧರ್ಮಿಯರು ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕರ್ನಾಟಕದಲ್ಲಿಯೂ ಸಹ ಹಿಂದೂಗಳೊಡನೆ ಅನ್ಯ ಧರ್ಮಿಯರು ತಮ್ಮ ಧರ್ಮದ ಮತಾಚರಣೆ ಮಾಡಲು ಅವಕಾಶ ಇದೆ. ಇದನ್ನು ನಾವು ಒಪ್ಪುತ್ತೇವೆ. ಆದರೆ ಹಿಂದೂಗಳಿಗೆ ಆಮಿಷ ತೋರಿಸಿ ಅಥವಾ ಹೆದರಿಸಿ ಬಲವಂತವಾಗಿ ಮತಾಂತರಿಸುವುದನ್ನು ಅಥವಾ ಮರಳು ಮಾಡಿ ಮತಾಂತರಿಸುವುದನ್ನು ಖಂಡಿಸುತ್ತೇವೆ. ಹಿಂದೂಗಳನ್ನು ಮತಾಂತರ ಮಾಡುವುದರಿಂದ ರಕ್ಷಿಸಿ ನಮ್ಮ ಧರ್ಮ ಕಾಪಾಡುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ ಎಂದು ವಿಹೆಚ್ ಪಿ ಕಾರ್ಯಕರ್ತರು ಮನವಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಅನ್ಯ ಧರ್ಮಿಯರಲ್ಲದೆ ಅತೀ ಹೆಚ್ಚು ಸಂಖ್ಯೆಯಲ್ಲಿ ಹಿಂದೂಗಳು ಸಹ ಮತ ಹಾಕಿದ್ದಾರೆ. ಅವರ ಮತಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಹೊರತು ಕೇವಲ ಅಲ್ಪ ಸಂಖ್ಯಾತರಿಂದಲ್ಲ. ಮತಾಂತರ ನಿಷೇಧ ಕಾಯ್ದೆ ಹಿಂಪಡೆದಿರುವುದು ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ಸಚಿವ ಸಂಪುಟದಲ್ಲಿ ಮತಾಂತರ ಕಾಯ್ದೆ ನಿಷೇಧ ಮಾಡುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಹಿಂದಿನ ಸರ್ಕಾರವು ಶಾಲಾ ಪಠ್ಯದಲ್ಲಿ ಸೇರಿಸಿದ್ದ ಸಾವರ್ಕರ್ ರಂತಹ ದೇಶ ಭಕ್ತರ ಪರಿಚಯ ಪಾಠಗಳನ್ನು ತೆಗೆಯಲು ನಿರ್ಧರಿಸಿದ್ದನ್ನು ಖಂಡಿಸಿದ್ದಾರೆ.
ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ಉತ್ತರ ಪ್ರಾಂತ ಕರ್ನಾಟಕದ ಅಧ್ಯಕ್ಷ ಡಾ.ಎಸ್.ಆರ್.ರಾಮನಗೌಡರ, ಕೃಷ್ಣ ಭಟ್, ಮುರುಗೇಂದ್ರಗೌಡ ಪಾಟೀಲ, ಶರದ್ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ