ದಲಿತ ಮುಖಂಡ ಮಡಿವಾಳಪ್ಪ ವಕ್ಕುಂದ ಸಲಹೆ
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು: ಉಪವಿಭಾಗ ಮತ್ತು ತಾಲೂಕು ಮಟ್ಟದಲ್ಲಿ ಕಾನೂನಿನಡಿ ದಕ್ಷ ರೀತಿಯಿಂದ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಮಾದಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಡಿವಾಳಪ್ಪ ವಕ್ಕುಂದ ಸಲಹೆ ನೀಡಿದರು.
ತಾಲೂಕಿನ ಡೊಂಬರಕೊಪ್ಪ ನಿರೀಕ್ಷಣಾ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾರ್ಗನಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆ ಕುರಿತು ಕೆಲ ವಿವರಣೆಗಳನ್ನು ಅವರು ನೀಡಿದರು.
ಮಾರ್ಗನಕೊಪ್ಪ ಗ್ರಾಮದಲ್ಲಿ ದಲಿತರು ದೇವಸ್ಥಾನ ಪ್ರವೇಶದ ವಿಷಯ ಮುಂದಿಟ್ಟುಕೊಂಡು ಅನ್ಯ ಕೋಮಿನ ಜನರು ಗೊಂದಲ ಸೃಷ್ಟಿ ಮಾಡಲು ಯತ್ನಿಸಿದ್ದರು. ಸುದ್ದಿ ತಿಳಿದ ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಯಮನೂರ, ಸಿಪಿಐ ಮಹಾಂತೇಶ ಹೊಸಪೇಟ, ಪಿಎಸ್‍ಐ ಎಚ್. ಎಲ್. ಧರ್ಮಟ್ಟಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಗದೀಶ ಗೌಡರ ಸ್ಥಳಕ್ಕೆ ಧಾವಿಸಿ ಬಂದಿದ್ದರು. ಸೃಷ್ಟಿಯಾಗಿದ್ದ ಗೊಂದಲವನ್ನು ಬಗೆ ಹರಿಸಿ ಊರಲ್ಲಿ ಗೊಂದಲ ಸೃಷ್ಟಿಯಾಗದಂತೆ ಎಚ್ಚರ ವಹಿಸಿದರು. ಇದರಿಂದ ಗೊಂದಲ ವಾತಾವರಣ ಸೃಷ್ಟಿ ಆಗುವುದು ತಪ್ಪಿತು ಎಂದು ಅವರು ಅಂದಿನ ಘಟನೆ ಕುರಿತು ವಿವರಣೆ ನೀಡಿದರು.
ಆದರೆ ಸಮಾಜದ ಕೆಲವರು ವೈಯಕ್ತಿಕ ದ್ವೇಷವಿಟ್ಟುಕೊಂಡು ದಕ್ಷತೆ ಮತ್ತು ಚಾಣಾಕ್ಷ ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ದಲಿತ ಮುಖಂಡರು ಮತ್ತು ದಲಿತ ಸಮಾಜದವರ ಜೊತೆ ಇದ್ದಾರೆ. ಅವರ ಮೇಲೆ ಅಹಿತಕರ ಘಟನೆ ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಂಡು ದಲಿತರಿಗೆ ನ್ಯಾಯ ಕೊಡಿಸುವ ದಿಟ್ಟತನ ಅವರಲ್ಲಿದೆ ಎಂದು ಹೇಳಿದರು.
ಮುಖಂಡರಿಗೆ ಗೊತ್ತಿಲ್ಲ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮವಾದ ಸಂಘಟನೆ ಜಿಲ್ಲಾ ಮಟ್ಟದಲ್ಲಿ ಅಕ್ಟೋಬರ್ 3 ಬೆಳಗಾವಿಯಲ್ಲಿ ಏರ್ಪಡಿಸಿರುವ ಪ್ರತಿಭಟನೆ ಕಿತ್ತೂರು ತಾಲೂಕಿನಲ್ಲಿರುವ ದಲಿತ ಸಮಿತಿಯ ಯಾವೊಬ್ಬರು ಸದಸ್ಯರಿಗೆ ಗೊತ್ತಿಲ್ಲ. ದಕ್ಷ ಅಧಿಕಾರಿಗಳ ವಿರುದ್ಧ ಈ ರೀತಿಯ ಪ್ರತಿಭಟನೆ ನಡೆಸುವುದು ತರವಲ್ಲ. ಕೂಡಲೇ ಈ ಪ್ರತಿಭಟನೆ ಸ್ಥಗಿತಗೊಳಿಸಬೇಕು ಎಂದು ವಕ್ಕುಂದ ಒತ್ತಾಯಿಸಿದರು.
ಒಬ್ಬ ಅಧಿಕಾರಿ ಗುರಿಯಾಗಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಎಷ್ಟು ಸಮರ್ಥನೀಯವಾಗಿದೆ ಎಂದು ಪ್ರಶ್ನಿಸಿದ ಅವರು, ಕೆಲವರು ಹೀಗೇಕೆ ಮಾಡುತ್ತಿದ್ದಾರೆ ಎಂಬುದು ಒಗಟಾಗಿದೆ ಎಂದರು.
ಹಾಗೊಂದು ವೇಳೆ ಅಧಿಕಾರಿಗಳು ತಪ್ಪು ಮಾಡಿದ್ದೇ ಖಾತ್ರಿಯಾದರೆ ಸಾಕಷ್ಟು ಸಾಕ್ಷಾಧಾರ ಇಟ್ಟುಕೊಂಡು ಮೇಲಾಧಿಕಾರಿ ಗಮನಕ್ಕೆ ತರುವ ಕೆಲಸ ಮಾಡುವುದಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ಮುಖಂಡ ಫಕ್ಕೀರಪ್ಪ ಜಾಂಗಟಿ ಮಾತನಾಡಿ ದಲಿತ ಸಮಾಜದ ಜೊತೆಗೆ ಆತ್ಮೀಯತೆಯಿಂದ ಇರುವ ಅಧಿಕಾರಿ ವಿರುದ್ಧ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಷ್ಟಕ್ಕೂ ಪೊಲೀಸ್ ಅಧಿಕಾರಿ ವಿರುದ್ಧ ಆ ಊರಿನ ದಲಿತರು ಲಿಖಿತವಾಗಿ ದೂರು ಕೊಟ್ಟಿಲ್ಲ ಎಂದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ರಾಜು ಜಾಂಗಟಿ ಮಾತನಾಡಿದರು. ಮುಖಂಡರಾದ ಸುಭಾಸ ಹಂಚಿನಮನಿ, ಮಲ್ಲೇಶಪ್ಪ ಮಾದರ, ರಾಜು ಮಣ್ಣಪ್ಪನವರ, ಈರಣ್ಣಾ ಕಲ್ಲವಡ್ಡರ, ಬಸವರಾಜ ಗಾಳಿ, ಉಮೇಶ ವಡ್ಡರ, ರುದ್ರಪ್ಪ ಲಿಂಗಮೇತ್ರಿ ಇತರರು ಉಪಸ್ಥಿತರಿದ್ದರು.
ದಲಿತರ ಮೇಲಾದ ಘಟನೆ ವಿಚಾರಣೆಗೆ ಊರಿಗೆ ಬಂದಿದ್ದ ಡಿವೈಎಸ್ಪಿ ಶಿವಾನಂದ ಕಟಗಿ ಅವರು, ನಿಮಗೆ ನೋವಾಗಿದ್ದರೆ, ಸರಿಯಾಗಿ ವರ್ತನೆ ಮಾಡದ ಘಟನೆ ನಡೆದಿದ್ದರೆ ಈ ಬಗ್ಗೆ ಧೈರ್ಯವಾಗಿ ಮುಂದೆ ಬಂದು ದೂರು ನೀಡಬೇಕು. ಪೊಲೀಸ್ ಇಲಾಖೆ ನಿಮ್ಮ ಜೊತೆಗೆ ಇರುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದ್ದರು. ಆದರೆ ಯಾರೂ ದೂರು ಕೊಡಲಿಲ್ಲ-ರಾಜು ಜಾಂಗಟಿ, ಕಾರ್ಯದರ್ಶಿ,ಬೆಳಗಾವಿ ಮಾದಿಗ ಮೀಸಲಾತಿ ಹೋರಾಟ ಸಮಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ