ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರ ಫೆ.14ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಬಂಡವಾಳ ಹೂಡಿಕೆದಾರರ ಸಮಾವೇಶ ಬಹಿಷ್ಕರಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದ್ದ ಪಕ್ಷದ ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಕುರಿತು ಶುಕ್ರವಾರ ಬಿಜೆಪಿ ಕೋರಿ ಕಮಿಟಿ ಸಭೆ ನಡೆಯಲಿದೆ.
ಬಿಜೆಪಿ ವೈದ್ಯಕೀಯ ವಿಭಾಗದ ಸಂಚಾಲಕಿ ಡಾ.ಸೋನಾಲಿ ಸರ್ನೋಬತ್ ಈ ಸಂಬಂಧ ಟ್ವೀಟ್ ಮಾಡಿದ್ದಲ್ಲದೆ, ಸೆಲ್ಫ್ ವೀಡಿಯೋ ಮಾಡಿ ಹುಬ್ಬಳ್ಳಿ ಸಮಾವೇಶ ನಿಷೇಧಿಸುವಂತೆ ಕರೆ ನೀಡಿದ್ದರು. ಜೊತೆಗೆ ವಾಣಿಜ್ಯೋದ್ಯಮ ಸಂಘ, ಸಣ್ಣ ಕೈಗಾರಿಕೆಗಳ ಸಂಘ, ಫೌಂಡ್ರಿ ಕ್ಲಸ್ಟರ್ ಮತ್ತಿತರ ಸಂಘಟನೆಗಳು ಸಮಾವೇಶ ಬಹಿಷ್ಕರಿಸುವಂತೆ ಕರೆ ನೀಡಿ ಎಂದು ಪಕ್ಷದ ಜನಪ್ರತಿನಿಧಿಗಳಿಗೂ ಆಗ್ರಹಿಸಿದ್ದರು.
ಈ ಕುರಿತು ಪಕ್ಷದ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾದ ನಂತರ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಲ್ಲದೆ, ತಮ್ಮ ಹೇಳಿಕೆ ಪ್ರಕಟಿಸದಂತೆ ಮಾಧ್ಯಮಗಳಿಗೆ ಸಂದೇಶ ಕಳಿಸಿದ್ದರು.
ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೀವ ಟೋಪಣ್ಣವರ್ ಕೂಡ ಈ ಸಂಬಂಧ ಟ್ವೀಟ್ ಮಾಡಿದ್ದರು.
ಪಕ್ಷದ ಪದಾಧಿಕಾರಿಗಳಾಗಿದ್ದುಕೊಂಡು ಪಕ್ಷದ ಸರಕಾರ ಏರ್ಪಡಿಸಿರುವ ಸಮಾವೇಶ ಬಹುಷ್ಕರಿಸುವಂತೆ ಕರೆ ನೀಡಿದ್ದು ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ವಿರೋಧ ಪಕ್ಷಗಳು ನೀಡಬೇಕಿದ್ದ ಹೇಳಿಕೆಗಳನ್ನು ಪಕ್ಷದ ಪದಾಧಿಕಾರಿಗಳು ನೀಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.
ಪಕ್ಷಕ್ಕೆ ಹಾಗೂ ಸರಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿರುವವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವಂತೆ ಹೈಕಮಾಂಡ್ ಸೂಚನೆ ನೀಡಿದ್ದಲ್ಲದೆ, ಸ್ಥಳೀಯ ವಲಯದಲ್ಲೂ ತೀವ್ರ ಒತ್ತಡ ಬಂದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಕೋರ್ ಕಮಿಟಿ ಸಭೆ ಕರೆಯಲಾಗಿದೆ.
ಶುಕ್ರವಾರ ಬೆಳಗ್ಗೆ 9.30ಕ್ಕೆ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿ ಪಕ್ಷ ವಿರೋಧಿ ಹೇಳಿಕೆ ನೀಡಿರುವವರ ವಿರುದ್ಧ ಕ್ರಮದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡಿರುವವರು ಯಾರೇ ಆದರೂ ಶಿಸ್ತು ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಬಿಜೆಪಿ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಬಿಜೆಪಿ ಸರಕಾರದ ಸಮಾವೇಶ ನಿಷೇಧಿಸಲು ಬಿಜೆಪಿ ನಾಯಕಿ ಕರೆ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ