Kannada NewsLatest

ಕನ್ನಡ ಸಂಘಟನೆಗಳಿಂದ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ

ಕನ್ನಡ ಸಂಘಟನೆಗಳಿಂದ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಮಹಾರಾಷ್ಟ್ರದ ಕೊಯ್ನಾ ಹಾಗೂ ಮತ್ತಿತರ ಜಲಾಶಯಗಳಿಂದ ಬಿಡಲಾಗುತ್ತಿರುವ 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರಿನಿಂದಾಗಿ ಕರ್ನಾಟಕದ ಬೆಳಗಾವಿ, ಬಾಗಲಕೋಟ, ವಿಜಯಪುರ, ರಾಯಚೂರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆಗುತ್ತಿರುವ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಾನಿಗೆ ಮಹಾರಾಷ್ಟ್ರವೇ ಹೊಣೆಯಾಗಿದ್ದು ಈ ನಷ್ಟವನ್ನು ಆ ಸರಕಾರದಿಂದಲೆ ವಸೂಲಿ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಇಂದು ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿತು.

ನೆರೆ ಪೀಡಿತ ಪ್ರದೇಶಗಳಿಗೆ ಭೆಟ್ಟಿ ನೀಡಲು ಆಗಮಿಸಿದ ಮುಖ್ಯಮಂತ್ರಿಗಳಿಗೆ, ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಾದ ಚಿಕ್ಕೋಡಿ, ಅಥಣಿ, ಕಾಗವಾಡ ಹಾಗೂ ರಾಯಬಾಗ ತಾಲೂಕುಗಳ ಸ್ಥಿತಿಗತಿಯ ಕುರಿತ ಮನವಿಯೊಂದನ್ನು ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಇನ್ನಿತರ ಪದಾಧಿಕಾರಿಗಳು ಸಲ್ಲಿಸಿದರು

ಕಳೆದ ಮಾರ್ಚ ತಿಂಗಳಿಂದ ಜೂನ್‍ವರೆಗೆ ಕೃಷ್ಣಾ ತೀರದ ಜನತೆಗೆ ಕನಿಷ್ಠ 4 ಟಿ.ಎಂ.ಸಿ. ಕುಡಿಯುವ ನೀರನ್ನು ಪೂರೈಸಲು ಒಪ್ಪದೇ ಹೋದ ಮಹಾರಾಷ್ಟ್ರ ಸರಕಾರವು ಮೊದಲು “ನೀರು ವಿನಿಮಯ ಒಪ್ಪಂದಕ್ಕೆ” ಸಹಿ ಹಾಕಿದಾಗ ಮಾತ್ರ ನೀರು ಬಿಡುಗಡೆ ಮಾಡುವದಾಗಿ ಮೊಂಡುತನ ಪ್ರದರ್ಶಿಸಿತು.

ಆದರೆ ಈಗ ತನ್ನ ಜಲಾಶಯಗಳು ತುಂಬಿದ್ದರಿಂದ ಅನಿವಾರ್ಯವಾಗಿ 50 ಟಿ.ಎಂ.ಸಿ. ಗಿಂತ ಅಧಿಕ ನೀರನ್ನು ಬಿಡುಗಡೆ ಮಾಡುತ್ತಿದೆ. 2005-06 ರ ರಲ್ಲಿ ಕರ್ನಾಟಕಕ್ಕೆ ಮುನ್ಸೂಚನೆ ನೀಡದೇ 3.5 ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದ್ದರಿಂದ ಸುಮಾರು 126 ಕೋಟಿ ರೂಪಾಯಿ ಹಾನಿ ಸಂಭವಿಸಿತ್ತು.

ಈಗ 2005 ಕ್ಕಿಂತಲೂ ಅಧಿಕ ಪ್ರಮಾಣದ ನೀರು ಮಹಾರಾಷ್ಟ್ರದಿಂದ ಹರಿದು ಬರುತ್ತಿದೆ. ಪರಿಣಾಮವಾಗಿ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಒಂದು ಸಾವಿರ ಕೋಟಿಗಿಂತ ಅಧಿಕ ಹಾನಿಯಾಗಿಯೆಂದು ಅಂದಾಜಿಸಲಾಗುತ್ತಿದೆ. ಈ ಹಾನಿಯನ್ನು ಮಹಾರಾಷ್ಟ್ರವೇ ತುಂಬಿಕೊಡಬೇಕೆಂದು ತಾವು ಅಲ್ಲಿಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸ್ಪಷ್ಟಪಡಿಸಬೇಕೆಂದು ಅಶೋಕ ಚಂದರಗಿ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಪ್ರಸಕ್ತ ನೆರೆ ಹಾವಳಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತುರ್ತಾಗಿ ಕೈಕೊಳ್ಳಬೇಕಾದ ಕ್ರಮಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ ಹಾಗೂ ಶಾಹಾಪೂರ, ಅಥಣಿ ತಾಲೂಕಿನ ಜುಂಜುರವಾಡ ಹಾಗೂ ಸವದಿ ಗ್ರಾಮಗಳನ್ನು ಸ್ಥಳಾಂತರಿಸಲು ತುರ್ತಾಗಿ ಕ್ರಮ ಕೈಕೊಳ್ಳಬೇಕು ಈ ಗ್ರಾಮಗಳ ಸಮಸ್ಯೆಗಳನ್ನು ಖುದ್ದಾಗಿ ಅಧ್ಯಯನ ನಡೆಸುವ ಸಲುವಾಗಿ ಹಿರಿಯ ಕಂದಾಯ ಅಧಿಕಾರಿಯೊಬ್ಬರನ್ನು ಗ್ರಾಮಗಳಿಗೆ ಕೂಡಲೇ ಕಳಿಸಬೇಕು.

ಕೃಷ್ಣಾ ತೀರದ ಜನತೆಗೆ ಈವರೆಗೂ ಯಾಂತ್ರಿಕೃತ ದೋಣಿಯನ್ನು ಒದಗಿಸಲಾಗಿಲ್ಲ. ಮಹಾರಾಷ್ಟ್ರದ ಕೋಲ್ಹಾಪೂರ ಜಿಲ್ಲಾ ಪರಿಷತ್ತು ಒದಗಿಸಿರುವ ದೋಣಿಯನ್ನೇ ಕರ್ನಾಟಕದ ಗಡಿಗಳ ಗ್ರಾಮಸ್ಥರು ಬಳಸುತ್ತಿದ್ದಾರೆ. ಈ ಗ್ರಾಮಸ್ಥರಿಗೆ ಕೂಡಲೇ ಕನಿಷ್ಠ ಐದು ದೋಣಿಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

2005-06 ರಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ ಆಗಿರುವ ನಷ್ಟದ ಅಧಿಕೃತ ಅಂಕಿ ಅಂಶಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಇಂದು ಮುಖ್ಯಮಂತ್ರಿಗಳನ್ನು ಭೆಟ್ಟಿಯಾದ ನಿಯೋಗದಲ್ಲಿ ಎಂ.ಜಿ. ಮಕಾನದಾರ, ರಾಜು ಕುಸೋಜಿ, ಸಾಗರ ಬೋರಗಲ್ಲ, ಜಿನೇಶ ಅಪ್ಪಣ್ಣವರ, ರಜತ ಅಂಕಲೆ, ವೀರೇಂದ್ರ ಗೋಬರಿ ಮುಂತಾದವರಿದ್ದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button