ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮಹಾಮಂಡಲದ ರಾಜ್ಯಾಧ್ಯಕ್ಷ ಡಾ. ಕೆ. ಎಸ್. ಶರ್ಮಾ ಅವರು ಬುಧವಾರ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಅರ್ಪಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ, ಸಾರಿಗೆ ಸಚಿವರು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡು ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ಪ್ರಮುಖ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡರೊಡನೆ ತ್ರಿ-ಪಕ್ಷೀಯ ಸಭೆಯನ್ನು ಏರ್ಪಡಿಸಿ, ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 1.30 ಲಕ್ಷ ಸಾರಿಗೆ ನೌಕರರ ವೇತನ ಪರಿಷ್ಕರಣೆ ಹಾಗೂ ಇತರ 14 ಬೇಡಿಕೆಗಳನ್ನು ಪರಿಹರಿಸಲು ಕ್ರಮವನ್ನು ಕೈಗೊಳ್ಳಬೇಕೆಂದು ಶರ್ಮಾ ಕೋರಿದರು.
ಈ ವಿನಂತಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ, ಶೀಘ್ರವೇ ಸಭೆ ಕರೆಯುವಂತೆ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಸಾರಿಗೆ ನಿಗಮಗಳಲ್ಲಿ ಕಾರ್ಯಪ್ರವೃತ್ತರಾಗಿರುವ ಒಂದು ಲಕ್ಷ ಮೂವತ್ತು ಸಾವಿರ ನೌಕರರಿಗೆ ಸಂಬಂಧಿಸಿದ ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆಗಳ ಕುರಿತಾದ ಕೈಗಾರಿಕಾ ಒಪ್ಪಂದ 1-1-2020 ರಿಂದ ಜಾರಿಗೆ ಬರಬೇಕಾಗಿದ್ದು, ಈಗಾಗಲೇ ಮೂರು ವರ್ಷ ಗತಿಸಿದ್ದರೂ ಆಡಳಿತ ವರ್ಗವಾಗಲೀ, ಸರ್ಕಾರವಾಗಲೀ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ತತ್ಪರಿಣಾಮ 1.30 ಲಕ್ಷ ಸಾರಿಗೆ ನೌಕರರು ಹಾಗೂ ಅವರ ಕುಟುಂಬಗಳು ಪಡಬಾರದ ಕಷ್ಟಗಳನ್ನು ಪಡುತ್ತಿವೆ.
ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗ ಜಾರಿಗೊಳಿಸುವುದಲ್ಲದೆ, 7ನೇ ವೇತನ ಆಯೋಗ ರಚಿಸಿ, ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಕ್ರಮಗಳನ್ನು ಕೈಗೊಂಡ ಸರ್ಕಾರ, ಸಾರಿಗೆ ನೌಕರರನ್ನು ಸಂಪೂರ್ಣ ಕಡೆಗಣಿಸಿರುವುದರಿಂದ ಅತೀವ ಅನ್ಯಾಯ ಮಾಡಿದಂತಾಗಿದೆ.
ಈ ಸಾರಿಗೆ ನೌಕರರ ಈ ದುರಂತ ಸ್ಥಿತಿಯನ್ನು ನಿವಾರಿಸಲು ರಾಜ್ಯದ ಮುಖ್ಯ ಮಂತ್ರಿಗಳು ಮಧ್ಯಪ್ರವೇಶ ಮಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿರುವ ಕಾರಣ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲೇ ತ್ರಿ-ಪಕ್ಷೀಯ ಸಭೆ ನಡೆಸುವುದು ಅತ್ಯವಶ್ಯವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಾರಿಗೆ ನೌಕರರು ಸರ್ಕಾರಿ ನೌಕರರಿಗಿಂತಲೂ ಹೆಚ್ಚು ದುಡಿಯುವವರಾಗಿದ್ದಾರೆ. ಅಲ್ಲದೆ, ಇವರು ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಂತೆಯೇ ಇವರ ಬಗ್ಗೆ ಆದ್ಯ ಗಮನವನ್ನು ನೀಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಸಾರಿಗೆ ನೌಕರರ ಈ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಈ ಸಾರಿಗೆ ನೌಕರರ ಪ್ರಮುಖ ಸಂಘಟನೆಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿಕೊಂಡು, ಈಗಾಗಲೇ ಈ ಸಮಿತಿ ಮೂಲಕ 14 ಬೇಡಿಕೆಗಳ “ಚಾರ್ಟರ್ ಆಫ್ ಡಿಮ್ಯಾಂಡ್ಸ್” ಕೊಟ್ಟಿದ್ದು, ಇದನ್ನು ಸರ್ಕಾರಿ ಹಾಗೂ ಆಡಳಿತವರ್ಗ ಪರಿಗಣಿಸುವಂತೆ ಮಾರ್ಗದರ್ಶನ ನೀಡಲು ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ತ್ರಿ-ಪಕ್ಷೀಯ ಸಭೆ ನಡೆಸುವುದು ಅವಶ್ಯವಾಗಿದೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಡಾ. ಕೆ. ಎಸ್. ಶರ್ಮಾ ಅವರು ಜಂಟಿ ಕ್ರಿಯಾ ಸಮಿತಿ ಪರವಾಗಿ ಮಂತ್ರಿಗೆ ಒತ್ತಾಯಿಸಿದರು.
*ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಕಾರು; ಮೂವರ ದುರ್ಮರಣ*
https://pragati.taskdun.com/car-accident3-deathshiratumakuru/
ಎಂಇಎಸ್ ಗೆ ಬಿತ್ತು ಮೂಗುದಾರ: ಇನ್ನಾದರೂ ಬೆಳಗಾವಿಗೆ ದೊರೆತೀತೇ ಶಾಂತಿ?
https://pragati.taskdun.com/border-dispute-legal-action-if-trade-is-interrupted-keep-an-eye-on-social-media/
*ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಪ್ರಮುಖ ಆರೋಪಿಯ ಬಂಧನ*
https://pragati.taskdun.com/kptcl-exam-scandal-king-pin-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ