*ಅಡಿಕೆ ಬೆಳೆ ರೋಗಬಾಧೆ, ಇಳುವರಿ ಕುಸಿತ: ರೈತರ ನೆರವಿಗೆ ಧಾವಿಸುವಂತೆ ಶಾಸಕ ಭೀಮಣ್ಣ ನಾಯ್ಕ್ ಗೆ ಮನವಿ*

ಪ್ರಗತಿವಾಹಿನಿ ಸುದ್ದಿ: ಶಿರಸಿ: ತಾಲ್ಲೂಕಿನಾದ್ಯಂತ ಅಡಿಕೆ ಬೆಳೆ ಹಾಗೂ ಮರಕ್ಕೆ ತಗುಲಿರುವ ಭೀಕರ ರೋಗಬಾಧೆ ಹಾಗೂ ಇಳುವರಿ ಕುಸಿತದಿಂದ ರೈತ ಸಮುದಾಯ ಕಂಗಾಲಾಗಿದ್ದು, ಅವರ ನೆರವಿಗೆ ಧಾವಿಸುವಂತೆ ಕೋರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪರವಾಗಿ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ನಗರದ ಸುಪ್ರಿಯಾ ಹೋಟೆಲ್ ನಲ್ಲಿ ಶನಿವಾರ ಮನವಿ ಸಲ್ಲಿಸಿದಸಿದ್ದಾಪುರ ತಾಲೂಕಿನ ಸಹಕಾರಿ ಸಂಘಗಳ ಪ್ರತಿನಿಧಿಗಳು ಈ ಹಕ್ಕೊತ್ತಾಯ ಮಾಡಿದರು. ಸಿದ್ದಾಪುರ ತಾಲೂಕೊಂದರಲ್ಲೇ ಶೇ. 80 ಕ್ಕೂ ಹೆಚ್ಚು ಕುಟುಂಬಗಳು ಜೀವನೋಪಾಯಕ್ಕಾಗಿ ಅಡಿಕೆ ಬೆಳೆಯನ್ನೇ ನಂಬಿಕೊಂಡಿವೆ. ಆದರೆ ಕಳೆದ ಎರಡು ವರ್ಷಗಳಿಂದ ಅಡಿಕೆ ಮರಗಳಿಗೆ ಮಾರಕವಾಗಿ ಪರಿಣಮಿಸಿರುವ ಎಲೆ ಚುಕ್ಕೆ ರೋಗ ಹಾಗೂ ಇತರ ರೋಗಗಳ ಹಾವಳಿಯಿಂದಾಗಿ ಸಾವಿರಾರು ಎಕರೆ ತೋಟಗಳು ನಾಶವಾಗುವ ಹಂತಕ್ಕೆ ತಲುಪಿವೆ. ಕಳೆದ ವರ್ಷ ಇಳುವರಿಯಲ್ಲಿ ಶೇ. 50 ರಷ್ಟು ಕುಸಿತ ಕಂಡಿದ್ದರೆ, ಈ ಬಾರಿ ಅದು ಕೇವಲ ಶೇ. 30 ಕ್ಕೆ ಸೀಮಿತವಾಗುವ ಭೀತಿ ಎದುರಾಗಿದೆ ಎಂದು ವಿವರಿಸಿದರು.
ಅತಿಯಾದ ಮಳೆಯಿಂದ ಉಂಟಾದ ಕೊಳೆ ರೋಗ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಕೃಷಿಗಾಗಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 114 ಕೋಟಿ ರೂ. ಬೆಳೆ ಸಾಲ ಹಾಗೂ 98 ಕೋಟಿ ರೂ. ಮಧ್ಯಮಾವಧಿ ಸಾಲದ ಹೊರೆಯಲ್ಲಿದ್ದಾರೆ. ಇಳುವರಿ ಇಲ್ಲದೆ ಸಾಲ ಮರುಪಾವತಿ ಮಾಡುವುದು ಅಸಾಧ್ಯವಾಗಿದೆ ಎಂದು ವಿವರಿಸಿದರು.
ಕಳೆದ ಸಾಲಿನ ಬೆಳೆ ಸಾಲವನ್ನು ಬಡ್ಡಿ ರಿಯಾಯಿತಿಯೊಂದಿಗೆ ಮುಂದಿನ ಸಾಲಿಗೆ ರೈತರಿಗೆ ನವೀಕರಿಸಬೇಕು ಹಾಗೂ ಸೊಸೈಟಿಗಳಿಗೆ ನೀಡಲಾಗುವ ಬಡ್ಡಿ ಹಣ ಪಾವತಿಸಬೇಕು ಎಂದು ಮನವಿಯಲ್ಲಿ ವಿವರಿಸಿದರು.
ಮಧ್ಯಮಾವಧಿ ಸಾಲದ ಕಂತು ಪಾವತಿಗೆ ಕನಿಷ್ಠ ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ನೀಡಬೇಕು. ಜೊತೆಗೆ 2024-25ನೇ ಸಾಲಿನ ಬೆಳೆ ವಿಮೆ ಪರಿಹಾರ ಮೊತ್ತವನ್ನು ಶೀಘ್ರವಾಗಿ ವಿತರಿಸಲು ಸರ್ಕಾರಕ್ಕೆ ಒತ್ತಡ ಹೇರಬೇಕೆಂದು ರೈತರ ಪರವಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಸಹಕಾರಿಗಳಾದ ಎಂ.ಎಲ್.ಭಟ್ಟ, ಸಿ.ಎನ್.ಹೆಗಡೆ, ರಾಜು ಹೆಗಡೆ, ಎಂ.ಎನ್.ಹೆಗಡೆ, ಎಂ.ಜಿ.ನಾಯ್ಕ, ಅಶೋಕ ಹೆಗಡೆ, ವಿವೇಕ ಭಟ್ಟ ಗಡಿಹಿತ್ಲು, ಜಿ.ಎಂ.ಭಟ್, ಸುಬ್ರಾಯ ಸಾಯಿಮನೆ, ಪಿ.ಕೆ.ನಾಯ್ಕ, ಸಿ.ಎನ್.ಹೆಗಡೆ, ಕೆ.ಆರ್.ವಿನಾಯಕ, ಕೇಶವ ದೊಡ್ಮನೆ, ಸುಧೀರ ಗೌಡ ಹಾಗೂ ಟಿಎಂಎಸ್ ಸಿಇಓಸತೀಶ ಹೆಗಡೆ ಸೇರಿದಂತೆ ಅನೇಕ ಸಹಕಾರಿ ಧುರೀಣರು ಉಪಸ್ಥಿತರಿದ್ದರು.



