*ಅಡಿಕೆ ಮಾರಕ ರೋಗ ಪ್ರಕರಣ; ವಿಧಾನಸಭೆಯಲ್ಲಿ ಪ್ರತಿಧ್ವನಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಡಿಕೆ ಬೆಳೆಗೆ ತಗುಲಿರುವ ರೋಗಗಳ ಕುರಿತು ಸಂಶೋಧನೆ ನಡೆಸಲು ಹಣದ ಕೊರತೆ ಇಲ್ಲ. ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಸಾಧ್ಯವಾದ ಎಲ್ಲಾ ರೀತಿಯಲ್ಲಿ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಅರಗಜ್ಞಾನೇಂದ್ರ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರಿಸುತ್ತಿದ್ದರು. ಅಡಿಕೆಗೆ ತಗುಲಿರುವ ಹಳದಿ ಎಲೆ ಚುಕ್ಕಿರೋಗ ಮತ್ತು ಮಹಾಮಾರಿ ಎಲೆ ಚುಕ್ಕಿ ರೋಗ ಬಹಳ ಗಂಭೀರವಾಗಿದ್ದು 50-60 ಕ್ವಿಂಟಲ್ ಬೆಳೆ ಬೆಳೆಯುತ್ತಿದ್ದ ರೈತರು 15-20 ಕೆಜಿಯನ್ನೂ ಬೆಳೆಯಲಾಗದೇ ಗುಳೇ ಹೋಗುತ್ತಿದ್ದಾರೆ. ಹೀಗೆ ಮುಂದುವರೆದರೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುವ ಆತಂಕವಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಿ ಸಂಶೋಧನಾ ಕೇಂದ್ರಗಳ ಜೊತೆಗೆ ಖಾಸಗಿ ಸಂಶೋಧನಾ ಕೇಂದ್ರಗಳಿಗೂ ಸಂಶೋಧನಾ ಜವಾಬ್ದಾರಿ ವಹಿಸಬೇಕು ಎಂದು ಅರಗ ಜ್ಞಾನೇಂದ್ರ ಒತ್ತಾಯಿಸಿದರು.
ಸಂಶೋಧನೆಯ ಜೊತೆಗೆ ಪರ್ಯಾಯ ಬೆಳೆಗೂ ಸಹ ಸಹಾಯ ಧನ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಮುಖ್ಯಮಂತ್ರಿಗಳು ಸಹ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.


