*ಮಗಳ ವಿರುದ್ಧದ ವದಂತಿಗಳಿಗೆ ಸಿಡಿದೆದ್ದ ಅರ್ಜುನ್ ಸರ್ಜಾ*: *ಪೊಲೀಸರಿಗೆ ದೂರು ದಾಖಲಿಸಿದ ನಟ*

ಪ್ರಗತಿವಾಹಿನಿ ಸುದ್ದಿ: ಸ್ಟಾರ್ ನಟ ಅರ್ಜುನ್ ಸರ್ಜಾ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಹಿರಿಯ ಪುತ್ರಿ ಹಾಗೂ ನಟಿ ಐಶ್ವರ್ಯ ಅರ್ಜುನ್ ಅವರ ವೈಯಕ್ತಿಕ ಜೀವನದ ಬಗ್ಗೆ ಆಧಾರರಹಿತ ಮತ್ತು ಅವಹೇಳನಕಾರಿ ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳ ಗೌರವ ಮತ್ತು ಘನತೆಗೆ ಧಕ್ಕೆ ತರುವ ಆರೋಪಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ತಮ್ಮ ದೀರ್ಘಕಾಲದ ಸಂಗಾತಿ ಇಸೈ ಅವರನ್ನು ವಿವಾಹವಾಗಿದ್ದರು. ಈ ಮದುವೆ ಸಮಾರಂಭದಲ್ಲಿ ಕುಟುಂಬದ ಹಲವು ಸದಸ್ಯರು ಭಾಗವಹಿಸಿದ್ದರು. ಆದರೆ ಐಶ್ವರ್ಯ ಅವರ ಪತಿ, ನಟ ಉಮಾಪತಿ ರಾಮಯ್ಯ ಮದುವೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಐಶ್ವರ್ಯ ದಾಂಪತ್ಯ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡಿದ್ದವು.
ಇಷ್ಟಕ್ಕೇ ನಿಲ್ಲದೆ ಐಶ್ವರ್ಯ ಅವರ ವೈಯಕ್ತಿಕ ಅಭ್ಯಾಸಗಳ ಬಗ್ಗೆಯೂ ಕೆಲವರು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ತಮ್ಮ ನಿಲುವು ಸ್ಪಷ್ಟಪಡಿಸಿರುವ ಅರ್ಜುನ್ ಸರ್ಜಾ, ಐಶ್ವರ್ಯ ಅವರಿಗೆ ಗೌರವ, ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಸಂಪೂರ್ಣ ಹಕ್ಕಿದೆ. ತಂದೆಯಾಗಿ ಆ ಹಕ್ಕಿಗೆ ತಾವು ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಮಗಳ ಬಗ್ಗೆ ಪುರಾವೆಯಿಲ್ಲದ ಆರೋಪಗಳು ಹರಿದಾಡುತ್ತಿರುವಾಗ ಮೌನವಾಗಿರಲು ಸಾಧ್ಯವಿಲ್ಲ. ತಮ್ಮ ಕುಟುಂಬ ವೈಯಕ್ತಿಕ ವಿವಾದಗಳಿಂದ ದೂರವಿರಲು ಬಯಸುತ್ತದೆ. ಆದರೆ ಆ ಮೌನವನ್ನು ದೌರ್ಬಲ್ಯವೆಂದು ಭಾವಿಸಬಾರದು ಎಂದು ಎಚ್ಚರಿಸಿದ್ದಾರೆ.
ಮಹಿಳೆಯರ ವೈಯಕ್ತಿಕ ಜೀವನದ ಬಗ್ಗೆ ಆಧಾರವಿಲ್ಲದೆ ತೀರ್ಪು ನೀಡುವ ಪ್ರವೃತ್ತಿ ಅಪಾಯಕಾರಿ. ಇಂತಹ ಆರೋಪಗಳನ್ನು ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರ್ಜುನ್ ಸರ್ಜಾ ಸ್ಪಷ್ಟಪಡಿಸಿದ್ದಾರೆ.
ಇನ್ನು ಕೆಲವು ದಿನಗಳ ಹಿಂದೆ ಉಮಾಪತಿ ಅವರ ತಂದೆ, ನಟ ತಂಬಿ ರಾಮಯ್ಯ ಕೂಡ ದಾಂಪತ್ಯ ಜೀವನದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದರು. ವಿಚ್ಛೇದನದ ಸುದ್ದಿ ಕೇವಲ ಗಾಳಿಸುದ್ದಿ. ಐಶ್ವರ್ಯ ಮತ್ತು ಉಮಾಪತಿ ಇಬ್ಬರೂ ಚೆನ್ನೈ ನಿವಾಸದಲ್ಲಿ ಒಟ್ಟಿಗೆ ಸಂತೋಷವಾಗಿದ್ದಾರೆ ಎಂದು ಹೇಳಿದ್ದರು.
ಐಶ್ವರ್ಯ ಮತ್ತು ಉಮಾಪತಿ 2024ರ ಜೂನ್ನಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದರು. ಇದೀಗ ಕುಟುಂಬದ ಮದುವೆ ಸಮಾರಂಭವೊಂದರಲ್ಲಿ ಉಮಾಪತಿ ಕಾಣಿಸಿಕೊಳ್ಳದ ವಿಚಾರವನ್ನೇ ಮುಂದಿಟ್ಟುಕೊಂಡು ದಾಂಪತ್ಯದ ಬಗ್ಗೆ ವದಂತಿಗಳು ಹರಡಿರುವುದು ವಿವಾದಕ್ಕೆ ಕಾರಣವಾಗಿದೆ.
ಒಟ್ಟಾರೆ, ಮಗಳ ವೈಯಕ್ತಿಕ ಜೀವನದ ಬಗ್ಗೆ ಹರಡುತ್ತಿರುವ ಸುದ್ದಿಗಳ ವಿರುದ್ಧ ಅರ್ಜುನ್ ಸರ್ಜಾ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಮೂಲಕ ಆಧಾರರಹಿತ ಆರೋಪಗಳ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ.




