ಪ್ರಗತಿವಾಹಿನಿ ಸುದ್ದಿ; ಡೆಹ್ರಾಡೂನ್: ಭಾರತ ಚೀನಾ ಗಡಿಯಲ್ಲಿ ಉದ್ವಿಗ್ನಗೊಂಡಿದ್ದ ಪರಿಸ್ಥಿತಿ ಹಂತಹಂತವಾಗಿ ಶಾಂತವಾಗುತ್ತಿದ್ದು, ಗಡಿ ವಿಚಾರದಲ್ಲಿ ಎರಡೂ ದೇಶಗಳ ಮಧ್ಯೆ ಇರುವ ಭಿನ್ನಾಭಿಪ್ರಾಯ ಸದ್ಯದಲ್ಲಿಯೇ ಬಗೆಹರಿಯುವ ವಿಶ್ವಾಸವಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನಾರವಾಣೆ ಹೇಳಿದ್ದಾರೆ.
ಡೆಹ್ರಾಡೂನ್ ನಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಪರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ-ಚೀನಾ ಮಧ್ಯೆ ಈಗಾಗಲೇ ಸಾಕಷ್ಟು ಸುತ್ತಿನ ಮಾತುಕತೆಗಳು ನಡೆದಿರುವುದರಿಂದ ಭಿನ್ನಾಭಿಪ್ರಾಯಗಳು ಮರೆಯಾಗಿ ಗಡಿಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ನಮಗಿದೆ. ಸದ್ಯ ಪರಿಸ್ಥಿತಿಯೆಲ್ಲವೂ ನಿಯಂತ್ರಣದಲ್ಲಿದೆ ಎಂದರು.
ಭಾರತ ಮತ್ತು ಚೀನಾ ಮಿಲಿಟರಿಗಳು ನಿಯೋಜಿಸಿದ್ದ ಸೇನೆಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುತ್ತಿವೆ. ಗಾಲ್ವಾನ್ ನದಿಯ ಪ್ರದೇಶದಿಂದ ಸಾಕಷ್ಟು ಸೇನೆಯನ್ನು ಹಿಂಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಖಂಡಿತವಾಗಿಯೂ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ನೇಪಾಳದ ಜೊತೆಗೆ ನಮ್ಮ ಸಂಬಂಧ ಗಟ್ಟಿಯಾಗಿದೆ. ಆ ದೇಶದ ಜೊತೆಗೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸಂಬಂಧಗಳ ಬೆಸುಗೆಯಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ