ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈದಾನದಲ್ಲಿ ಫೆಬ್ರವರಿ 04 ರಿಂದ 15 ರವರೆಗೆ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ. ರ್ಯಾಲಿಗೆ ಆಗಮಿಸುವ ಅಭ್ಯರ್ಥಿಗಳ ಆರೋಗ್ಯ ತಪಾಸಣೆ, ಭದ್ರತೆ, ವಸತಿ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೇನಾ ನೇಮಕಾತಿ ರ್ಯಾಲಿಗೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಬೇಕು ಜೊತೆಗೆ ಅವಶ್ಯಕ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈದಾನದ ಒಳಗಡೆ ಹಾಗೂ ಗೇಟ್ ಬಳಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಭದ್ರತೆ ಒದಗಿಸಲು ತಿಳಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಅಂಬುಲೆನ್ಸ್ ಸೌಲಭ್ಯ ನೀಡಬೇಕು ಮತ್ತು ರ್ಯಾಲಿ ನಡೆಯುವ ದಿನಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಿರಬೇಕು ಎಂದು ಹೇಳಿದರು.
ಬಸ್ ನಿಲ್ದಾಣ ಮತ್ತು ರೈಲ್ವೇ ಸ್ಟೇಷನ್ ಮೂಲಕ ಬರುವ ಅಭ್ಯರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ತಿಳಿಸಿದರು ಹಾಗೂ ಅಭ್ಯರ್ಥಿಗಳು ಉಳಿದುಕೊಳ್ಳಲು ಪೀರನವಾಡಿಯಲ್ಲಿ ಕಲ್ಯಾಣ ಮಂಟಪ ವ್ಯವಸ್ಥೆ ಮಾಡಲು ಬೆಳಗಾವಿ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಸೂಚಿಸಿದರು.
ಮಹಾನಗರ ಪಾಲಿಕೆ ವತಿಯಿಂದ ಮೊಬೈಲ್ ಟಾಯ್ಲೆಟ್ ನೀಡಬೇಕು ಹಾಗೂ ರ್ಯಾಲಿಯಲ್ಲಿ ಪ್ರತಿ ದಿನ 5000 ಅಭ್ಯರ್ಥಿಗಳು ಭಾಗವಹಿಸಲಿದ್ದು, ಅವರಿಗೆ ಕುಡಿಯುವ ನೀರಿನ ಟ್ಯಾಂಕ್ ಒದಗಿಸುವುದರ ಜೊತೆಗೆ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಕೊಳ್ಳಬೇಕು ಎಂದು ತಿಳಿಸಿದರು.
ಒಂದು ಸುತ್ತಿನ ರ್ಯಾಲಿಯಲ್ಲಿ 250 ಅಭ್ಯರ್ಥಿಗಳು ಭಾಗವಹಿಸಲಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭ್ಯರ್ಥಿಗಳ ಪ್ರವೇಶ ಪತ್ರ ಹಾಗೂ ದಾಖಲಾತಿಗಳ ಪರಿಶೀಲನೆ ನಡೆಸಬೇಕು ಹಾಗೂ ವಿದ್ಯುತ್ ಸುರಬರಜು ಕಡಿತ ಆಗದಂತೆ ನಿರಂತರ ವಿದ್ಯುತ್ ಪೂರೈಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ರ್ಯಾಲಿ ನಡೆಯುವ ದಿನದ 24 ಗಂಟೆಗ ಕಾಲ ತುರ್ತು ಸೇವೆ ನೀಡಲು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ತಿಳಿಸಿದರು. ಆಸಕ್ತ ಎನ್.ಜಿ. ಓ ಅವರ ವತಿಯಿಂದ ಅಭ್ಯರ್ಥಿಗಳಿಗೆ ಫುಡ್ ಪ್ಯಾಕೆಟ್ ನೀಡಲು ಮನವಿ ಮಾಡುವುದಾಗಿ ಅಧಿಕಾರಿಗಳಿಗೆ ಹೇಳಿದರು.
ಸೇನಾ ನೇಮಕಾತಿ ನಿರ್ದೇಶಕ ರಾಹುಲ್ ಆರ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ.ಜಿ. ಬುಜಾರ್ಕಿ, ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಕೆ.ಎಸ್ ನಂದೇಶ, ಮಹಾನಗರ ಪಾಲಿಕೆ ಅಧಿಕಾರಿಗಳಾದ ಗಂಗಾಧರ, ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಆಂಜನೇಯ ಆರ್.ಕೆ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ಎಂ ಶಿವಕುಮಾರಸ್ವಾಮಿ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ