ಪ್ರಗತಿವಾಹಿನಿ ಸುದ್ದಿ; ವಿಶ್ವಸಂಸ್ಥೆ: ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯಾಗಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವುದಾಗಿ ಭಾರತೀಯ ಮೂಲದ ಅರೋರಾ ಆಕಾಂಕ್ಷಾ ಘೋಷಿಸಿದ್ದಾರೆ.
ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ(ಯುಎನ್‌ಡಿಪಿ)ದಲ್ಲಿ ಲೆಕ್ಕಪತ್ರ ಪರಿಶೋಧನಾ ಸಂಯೋಜಕಿಯಾಗಿರುವ 34 ವರ್ಷದ ಅರೋರಾ ಮುಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.
ಹಾಲಿ ಪ್ರಧಾನ ಕಾರ್ಯದರ್ಶಿಯಾಗಿರುವ 71 ವರ್ಷದ ಆಂಟೊನಿಯೊ ಗುಟೆರಸ್ ಅವರ ಅಧಿಕಾರಾವಧಿ ಈ ವರ್ಷದ ಡಿಸೆಂಬರ್‌ಗೆ ಕೊನೆಗೊಳ್ಳಲಿದೆ. ಮುಂದಿನ ಐದು ವರ್ಷಗಳ ಅವಧಿಗೂ ತಾನೇ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಲು ಬಯಸಿರುವುದಾಗಿ ಗುಟೆರಸ್ ಕಳೆದ ತಿಂಗಳು ಹೇಳಿದ್ದರು. ಇದರ ನಡುವೆಯೇ ಅರೋರಾ ಆಕಾಂಕ್ಷಾ ಅವರು ಉಮೇದುವಾರಿಕೆ ಪ್ರಕಟಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ #AroraForSG ಹೆಸರಿನ ಹ್ಯಾಷ್‌ಟ್ಯಾಗ್ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಸ್ಪೆಷಲ್ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು, ವಿಡಿಯೊದಲ್ಲಿ ‘ನನ್ನ ಸ್ಥಾನದಲ್ಲಿರುವ ಜನರು, ಅಂಥದ್ದೊಂದು ಉನ್ನತ ಹುದ್ದೆಗೆ ಏರುವುದು ಅಸಾಧ್ಯ. ಆದರೆ, ಅಂಥ ಅವಕಾಶ ಬರುವವರೆಗೂ ನಮ್ಮ ಸರದಿಗಾಗಿ ಕಾಯಬೇಕು‘ ಎಂದು ಹೇಳಿದ್ದಾರೆ.
ವಿಡಿಯೊದಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಆಕಾಂಕ್ಷಾ ನಡೆದಾಡುತ್ತಿರುವ ದೃಶ್ಯವಿದೆ. ಜತೆಗೆ, ವಿಶ್ವದ ವಿವಿಧ ರಾಷ್ಟ್ರಗಳಲ್ಲಿರುವ ನಿರಾಶ್ರಿತ ಕುಟುಂಬಗಳ ಸ್ಥಿತಿಗತಿ ಬಿಂಬಿಸುವ ದೃಶ್ಯಗಳಿವೆ. ದುರ್ಬಲ ವರ್ಗದವರ ಜೀವನ, ಕೊಳೆಗೇರಿಗಳ ಬಗ್ಗೆ ಮಾಹಿತಿ ನೀಡುತ್ತಾ ಸಾಗುವ ದೃಶ್ಯದ ತುಣುಕುಗಳಿವೆ. ವಿಶ್ವಸಂಸ್ಥೆಯಲ್ಲಿ ಅಧಿಕಾರ ನಡೆಸಿರುವವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಅಂಶವನ್ನು ಅರೋರಾ ಒತ್ತಿ ಹೇಳಿದ್ದು, ಕಳೆದ 75 ವರ್ಷಗಳಿಂದ ವಿಶ್ವಸಂಸ್ಥೆ ಜಾಗತಿಕವಾಗಿ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ನಿರಾಶ್ರಿತರು / ವಲಸಿಗರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಮಾನವೀಯ ನೆಲೆಯಲ್ಲಿ ನೆರವು ನೀಡಿದ್ದು ಕಡಿಮೆ. ತಂತ್ರಜ್ಞಾನ ಮತ್ತು ನಾವೀನ್ಯತೆ ವಿಚಾರದಲ್ಲೂ ಹಿಂದೆ ಬಿದ್ದಿದೆ. ನಾನು ವಿಶ್ವಸಂಸ್ಥೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಬದ್ಧರಾಗಿದ್ದೇನೆ. ಈ ಕಾರಣಕ್ಕಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ