ಪ್ರಗತಿವಾಹಿನಿ ಸುದ್ದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಇರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ.
ಮನೆಯ ಮಹಿಳಾ ಕೆಲಸದಾಳುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಅವರ ತಂದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕೃತ್ಯದ ಸಂತ್ರಸ್ತೆ ಹೇಳಿಕೆ ಆಧರಿಸಿ ಪ್ರಜ್ವಲ್ ರೇವಣ್ಣ ಅವರ ಮೇಲೆ 376 ರಡಿ ಸೆಕ್ಷನ್ ಅನ್ನು ಸಹ ಎಸ್‌ಐಟಿ ಸೇರಿಸಿತ್ತು. ಇದಾದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದ್ದರೂ, ಪ್ರಜ್ವಲ್ ರೇವಣ್ಣ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ.
ಸದ್ಯ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು, ಯಾವ ದೇಶದಲ್ಲಿ ಇದ್ದಾರೆ ಎಂಬ ಮಾಹಿತಿ ಎಸ್ಐಟಿ ತಂಡ ಕಲೆ ಹಾಕುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಿದ ಕೂಡಲೇ ಅವರನ್ನು ಬಂಧಿಸಲು ಎಸ್ಐಟಿ ಎಲ್ಲಾ ಪ್ಲ್ಯಾನ್ ಮಾಡಿಕೊಂಡಿದೆ. ಜೊತೆಗೆ ಪ್ರಜ್ವಲ್ ಬಳಿಯಿರುವ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿಗು ಕೂಡ ಎಸ್ಐಟಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಪೂರಕವಾಗಿ ಕೆಲ ದಾಖಲೆಗಳನ್ನು ಸಂಗ್ರಹಿಸಿ ಎಸ್ಐಟಿ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ಪ್ರಕರಣ ಸಂಬಂಧ ವಿದೇಶದಲ್ಲಿರುವ ಪ್ರಜ್ವಲ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ಮನವಿ ಮಾಡಿದ್ದರು. ಅದರಂತೆ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ