ಪ್ರಗತಿವಾಹಿನಿ ಸುದ್ದಿ, ಪುಣೆ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆರೋಪಿ ರಾಜೇಶ್ ಅಗವಾನೆ (42) ಬಂಧಿತ. ಈತ ವಡಗಾಂವ ನಿಂಬಾಳ್ಕರ್ ನಿವಾಸಿಯಾಗಿದ್ದು, ಸದ್ಯ ಮುಂಬಯಿಯ ಧಾರಾವಿ ಪ್ರದೇಶದಲ್ಲಿ ವಾಸವಾಗಿದ್ದಾನೆ. ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಈತನ ಪತ್ನಿ ಪುಣೆಯಲ್ಲಿ ನೆಲೆಸಿದ್ದು ಆಗಾಗ ಅಲ್ಲಿಗೆ ಹೋಗುತ್ತಿದ್ದ.
ಸೋಮವಾರ ಸಂಜೆ ಕುಡಿದ ಮತ್ತಿನಲ್ಲಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ, ತನಗೆ ಎದೆನೋವು ಶುರುವಾಗಿದ್ದು ಕೂಡಲೆ ಆ್ಯಂಬ್ಯುಲೆನ್ಸ್ ಕಳುಹಿಸುವಂತೆ ಕೇಳಿದ್ದಾನೆ. ಕರೆ ಸ್ವೀಕರಿಸಿದ ಪೊಲೀಸರು 108ಗೆ ಕರೆ ಮಾಡುವಂತೆ ಸಲಹೆ ನೀಡಿದಾಗ ಕೆರಳಿ ಸಿಎಂ ಏಕನಾಥ ಶಿಂದೆ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಫೋನ್ ಕರೆ ಆಧಾರದಲ್ಲಿ ಈತನನ್ನು ಪತ್ತೆ ಹಚ್ಚಿರುವ ಪುಣೆ ಶಹರ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ