Latest

ತಿಪ್ಪೆ ಉಪ್ಪರಿಗೆ, ಉಪ್ಪರಿಗೆ ತಿಪ್ಪೆಯಾಗಿ ಬಾಳು ಸಪ್ಪೆಯಾಯ್ತು!

ಸುಹಾನಿ ಎಸ್

ಬದುಕು ಅಸ‍್ಥಿರ, ಸಂಸಾರ ನಿಸ್ಸಾರ, ಎಂದು ತಿಳಿದಾದ ಮೇಲೂ ನಾವು ಬದುಕು ಕಟ್ಟಿಕೊಳ್ಳಲು ಬಡಿದಾಡುವುದನ್ನು ಕಂಡು ಯಾಕೆ ಬಡಿದಾಡತೀ ತಮ್ಮ ಮಾಯಾ ಮೆಚ್ಚಿ ಈ ಸಂಸಾರ ನೆಚ್ಚಿ… ಜನಪದರು ಅಂದಿಗೆ ಹಾಡಿದ್ದಾರೆ. ಆದರೆ ನಮ್ಮ ಜನಕ್ಕೆ ಮಾಯದ ಪೊರೆ ಕಳಚುವುದು ಯಾವಾಗ..? “ನಾವು ಸಾಗುತ್ತಿರುವುದು – ತಪ್ಪು ಹೆಜ್ಜೆಗಳನ್ನಿಟ್ಟು, ಎಡವಿ ಮುಗ್ಗರಿಸಿ ಮತ್ತೆ ಚೇತರಿಸಿಕೊಂಡು ಸಾಗುತ್ತಿರುವುದು” – ಅದರ ಕಡೆಗೆ (ಸಂಜೆಗಣ್ಣಿನ ಹಿನ್ನೋಟ ; ಎ ಎನ್ ಮೂರ್ತಿರಾವ್) ಎಂಬುದಾದರೆ ಸುಧಾರಣೆ ಎಂಬುದು ಕನಸಿನ ಮಾತೇ ಸರಿ.

ನನ್ನ ಆತ್ಮೀಯ ಗೆಳೆಯನೊಬ್ಬ ಸಮಾನ ವಯಸ್ಕರಲ್ಲದಿದ್ದರೂ ಸಮಾನ ಮನಸ್ಕರು ಎಂದು ಹೇಳಬಹುದು, ಹಾಗೇ ಹೇಳುವುದೂ ಕೂಡ ಈಗೀಗ ತಪ್ಪು ಎನಿಸುತ್ತದೆ. ಆ ಗೆಳೆಯನ ಹೆಸರು ಇಲ್ಲಿ ಪ್ರಸ್ತಾಪಿಸುವುದು ಉಚಿತವಲ್ಲ, ಹಾಗಾಗಿ ರೇವಂತನೋ, ಹೇಮಂತನೋ, ಸಾವಂತನೋ ಎಂದಿಟ್ಟುಕೊಳ್ಳೋಣ. ಬಡತನಕ್ಕೆ ವಿಶೇಷಣ ಹಚ್ಚಿ ಹೇಳುವುದಾದರೆ.., ಕಡು ಬಡತನ, ಕಿತ್ತು ತಿನ್ನುವ ಬಡತನ, ಒಂದೊತ್ತಿನ ಊಟಕ್ಕೂ ಗತಿಯಿಲ್ಲದ ಆರ್ಥಿಕ ಸ್ಥಿತಿ-ಗತಿ ಅವರದ್ದಾಗಿತ್ತು – ನನ್ನದೂ ಕೂಡ. ಹಾಗಾಗಿ ಹೆಚ್ಚಿನ ಒಡನಾಟವಿತ್ತು. ಅವನು ತುಂಬ ಸ್ವಾಭಿಮಾನಿ ಯುವಕ. ಕಷ್ಟಪಟ್ಟು ಅಂದರೆ ಡಾ ಬಿ ಆರ್ ಅಂಬೇಡ್ಕರ್ ರಂತೆ ಬೀದಿ ದೀಪದ ಕೆಳಗೆ ಅಲ್ಲವಾದರೂ ಮುರುಕಲು ಮನೆಯಲ್ಲಿಯೇ ಚಿಂಣಿ ಬುಡ್ಡಿಯ ಕೆಳಗೆ ಓದಿ ಬೆಳೆದ, ಊರಲ್ಲಿ ದಿನಪತ್ರಿಕೆಗಳನ್ನು ಹಂಚುತ್ತಿದ್ದ, ಕೂಲಿ ಕೆಲಸಕ್ಕೂ ಹೋಗುವುದರ ಜೊತೆ-ಜೊತೆಗೆ ಬಿ ಎ, ಬಿ ಎಡ್ ಮುಗಿಸಿಕೊಂಡು ಬಂದಾದಮೇಲೆ ಗೃಹಪಾಠ ಮಾಡಿ ಹೊಟ್ಟೆ ಹೊರೆದು ಸಿ ಇ ಟಿ ಪಾಸು ಮಾಡಿಕೊಂಡು ಪ್ರಾಥಮಿಕನೋ ಪ್ರೌಢಶಾಲೆನೋ ಅಂತೂ ಸರಕಾರಿ ಹುದ್ದೆಯನ್ನು ಗಿಟ್ಟಿಸಿಕೊಂಡು ಊರಿಗೆ ಕೀರ್ತಿಯ ತಂದ.

ಹುಟ್ಟಿದ್ದಾಯ್ತು, ಬೆಳೆದದ್ದಾಯ್ತು, ಓದಿ ಕಡೆದು ಕಟ್ಟಿಹಾಕಿದ್ದಾಯ್ತು, ಸರಕಾರಿ ಹುದ್ದೆಯನ್ನು ಹಿಡಿದುಬಿಟ್ಟ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು. ಮುಂದಿನದು ಮತ್ತೇನು ಚಿಂತೆ..? ಉಣ್ಣುವ, ಉಡುವ, ತೊಡುವ, ಮದುವೆ, ಮಕ್ಕಳ ಚಿಂತೆ ಎಂಬಂತೆ ಕೈಗೆ ಬಂದ ಮಗನ ಮದುವೆ ಮಾಡಬೇಕು ಅನ್ನೋದು ತಂದೆ-ತಾಯಿಗಳ ಚಿಂತೆ. ಅಂತೆಯೇ ಹ್ಯಾಗೂ ಸಂಬಂಧದಲ್ಲಿಯೇ ಒಂದು ಹೆಣ್ಣು ಮದುವೆ ಮಾಡಿಬಿಡೋಣ ಎಂಬುದು ಅವರ ಬಯಕೆ. ಈತನದ್ದು ಒಂದೇ ಹಟ ಸರಕಾರಿ ನೌಕರಿ ಇರೋ ಹೆಣ್ಣನ್ನು ಮದುವೆಯಾಗಬೇಕು ಎಂಬುದು. ಇದು ಸಹಜ ಅಲ್ಲವೇ ಹೆಣ್ಣು ಹೆತ್ತ ತಂದೆ-ತಾಯಂದಿರು ನೌಕರಿ ವರನನ್ನು ಹುಡುಕುವುದು. ಆದರೆ ನೌಕರಿ ಇರುವ ವರ ನೌಕರಿ ಇರುವ ಕನ್ಯೆಯನ್ನು ಹುಡುಕುವುದು ಇಂದು ತೀರಾ ಸಾಮಾನ್ಯ ವಿಷಯವೇ ಆಗಿದೆ ಬಿಡಿ. ಅವನು ಅದನ್ನೇ ವಿಚಾರ ಮಾಡಿದ್ದ. ಆತನ ತಾಯಿ ನನ್ನ ಹತ್ತಿರ ಬಂದು ಅವನನ್ನು ಮದುವೆಗೆ ಒಪ್ಪಿಸುವಂತೆ ಹೇಳಿದಾಗ ಆಯ್ತು ಎಂದೆ..,

ಒಂದು ಸಮಯ ನೋಡಿ ಪೀಠಿಕೆ ಹಾಕಿದೆ. ಯಾಕೆ ನೀನು ನೌಕರಿ ಇರೋ ಹೆಣ್ಣನ್ನು ಬಯಸುವುದು..? ಸಂಬಂಧದಲ್ಲಿಯೇ ನಿಮ್ಮ ಅಪ್ಪ-ಅಮ್ಮ ನೋಡಿದ ನಾಲ್ಕಕ್ಷರ ಕಲಿತ ಹುಡುಗಿ ಯಾದರೆ ಸಾಲದೇ..? ನೀವು ಕೆಲಸ ಮುಗಿಸಿ ಮನೆಗೆ ಬರುವ ದಾರಿ ಕಾಯುವ ಹೆಣ್ಣು ಆದರೆ ಸರಿ, ಇಬ್ಬರೂ ಮುಂಜಾನೆ ಕೆಲಸಕ್ಕೆ ಹೊರಬಿದ್ದವರು, ಸಾಯಂಕಾಲ ಮನೆಗೆ ಇಬ್ಬರೂ ಸುಸ್ತಾಗಿ ಬಂದಾಗ ಸಹಜವಾಗಿ ಕೌಟುಂಬಿಕ ಕಲಹಗಳಾಗುವುದನ್ನು ನೀವು ಹತ್ತಾರು ಚಲನಚಿತ್ರಗಳಲ್ಲಿ ನೋಡಿರುತ್ತೀರಿ.., ಮುಂದೆ ಅದು ಬೇರೆ ತಿರುವು ಪಡೆದುಕೊಳ್ಳುತ್ತದೆ ಎಂದು ನನ್ನ ಅರಿವಿನಿ ಪರಿಧಿಯಲ್ಲಿ ಯುಕ್ತ ಸಲಹೆಗಳನ್ನು ನೀಡಿದೆ. ಅವನಿಗದು ಸರಿಬಾರದೆ ಹೇಳಿದ್ದು ಇಷ್ಟು : ‘ನಿನಗಿನ್ನೂ ಲೋಕಜ್ಞಾನ ತಿಳಿಯದು, ನಿನ್ನ ಮೂಗಿನ ನೇರಕ್ಕೆ ಯೋಚಿಸುವೆ. ಈಗಿನ ಕಾಲದಲ್ಲಿ  ಒಂದು ಪಗಾರದಿಂದ ಸಂಸಾರ ತೂಗಿಸೋದು ಕಷ್ಟ, ಎರಡು ಪಗಾರ ಆದರೆ ಅನುಕೂಲ ಎಂದ’ ನಾನು ಹೇಳಿದೆ ಅಲ್ವೋ ನಮ್ಮ-ನಿಮ್ಮ ಅಪ್ಪ-ಅಮ್ಮಂದಿರುಗಳು ಸರಕಾರಿ ನೌಕರಿ ಮಾಡಿಯೇ ನಮ್ಮನ್ನು ಸಾಕಿ –ಸಲಹಿ ಇಷ್ಟು ದೊಡ್ಡವರನ್ನು ಮಾಡಿದ್ದಾರಾ..? ಕಷ್ಟಪಟ್ಟು ದುಡಿದೇ ಸಾಕಿದ್ದೂ ತಾನೇ..! ನೀನು ದುಡಿದು ಹಾಕಿ, ಬಂದವಳು ಮಾಡಿಹಾಕುವಂತಾದರೆ ಸಾಲದೇ..? ದುರಾಸೆ ಒಳ್ಳೆಯದಲ್ಲ ಅಂತ ಎಷ್ಟು ಹೇಳಿದರೂ ಕೇಳದೆ ತನ್ನ ಹಠವನ್ನೇ ಸಾಧಿಸಿ ಮತ್ತೊಬ್ಬ ನೌಕರಿ ಮಾಡುವ ಹೆಣ್ಣನ್ನೇ ಮದುವೆಯಾದ. ತಿಪ್ಪೆ ಉಪ್ಪರಿಗೆಯಾಯ್ತು..! ಮೂರು-ಆರು-ಒಂಬತ್ತು ತಿಂಗಳಲ್ಲೇ ಕೆಮ್ಮು, ಸೀನು, ನೆಗಡಿ ಶುರುವಿಟ್ಟುಕೊಂಡಿತು. ಮಹಾವ್ಯಾಧಿಯಾಗಿ ಪರಿಣಮಿಸುವಷ್ಟರಲ್ಲಿ ಒಂದು ಗಂಡು ಮಗುವೂ ಆಗಿ ದುರದೃಷ್ಟ ಎಂಬಂತೆ ಆ ಮಗು ಸತ್ತುಹೋಯ್ತು, ಅನುಮಾನವೆಂಬ ಪೆಡಂಭೂತ ಮೆಟ್ಟಿತು. ಮೊಬೈಲ್ ಬ್ಯೂಸಿ ಯಾಕ್ಬಂತು..? ಯಾರ ಜೊತೆ ಮಾತಾಡತಿದ್ದೆ..? ಏನ್ಕಥೆ..? ದುಡಿದು ತರುವೆ ಎಂಬ ಹಮ್ಮು-ಬಿಮ್ಮು ಸಾಕಿನ್ನು ನೀನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲೇ ಬಿದ್ದಿರು, ನಾನು ದುಡಿದು ಹಾಕುವೆ ಎಂಬುದು ಇವನ ವಾದ. ಹಾಗಾದರೆ ಯಾವ ಸಂಭ್ರಮಕ್ಕೆ ಇವನು ನೌಕರಿ ಇರುವ ಹೆಣ್ಣನ್ನು ಬಯಸಿ ಮದುವೆಯಾದ್ದ್ದು..? ಕೊನೆಗೂ ಅವನ ಬಾಳು ವಿಚ್ಛೇದನದಲ್ಲಿ ಕೊನೆಗೊಂಡಿತು. ಇವನೇನೋ ನಾಲ್ಕಕ್ಷರ ಕಲಿಯದ ಹಳ್ಳಿಗುಗ್ಗುವನ್ನೇ ಹುಡುಕಿ ಎರಡನೆಯ ಸಂಬಂಧದಲ್ಲಿ ಮರುಮದುವೆ ಮಾಡಿ ಕೊಂಡು, ಎರಡು ಮಕ್ಕಳನ್ನು ಪಡೆದ, ಉಪ್ಪರಿಗೆ ತಿಪ್ಪೆಯಾಯ್ತು..! ಪಾಪ ಆ ಹೆಣ್ಣಿನ ಪಾಡೇನು..? ಸರಕಾರಿ ನೌಕರಿ, ಕೈತುಂಬ ಸಂಬಳ, ಬದುಕು ಮೂರಾಬಟ್ಟೆ ಯಾಗಿದೆ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾಳೆ. ವಿದ್ಯಾವಂತರ ಮನೋಗತ ಹೀಗಾದರೆ ಸಾಮಾನ್ಯರ ಪಾಡೇನು..? ಗಂಡು-ಹೆಣ್ಣು ಎಂಬ ಈ ತಾರತಮ್ಯ ಭಾವನೆ ಅಳಿಯುವದೆಂದು..?

ಅತ್ತಕಡೆ: ಜನ ಅವಳಿಗೆ ಯಾವನ್ಜೋಡಿನೋ ಕಳ್ಳ ಸಂಬಂಧ ಇತ್ತಂತೆ ಹಾಗಾಗಿ ಇವನಿಗೆ ವಿಚ್ಛೇದನ ನೀಡಿದ್ದಾಳೆಂದು ಮಾತ್ನಾಡಿ ಕೊಂಡರು.

ಇತ್ತಕಡೆ : ಇವನಿಗೆ ಇರಬೇಕಾದದ್ದೂ ಇರಲಿಲ್ವಂತೆ ಅದ್ಕೆ ಬೇರೆ ಯಾವನ್ನೋ ನೋಡ್ಕೊಂಡಿದ್ದಾಳೆಂದು ಕೊಂಕು ನುಡಿದರು.

ಸುತ್ತಮುತ್ತ : ರತಿಯಂಗಿರೋ, ಕೈತುಂಬ ಸಂಬಳ ತರೋ ಹೆಣ್ಣನ್ನು ಬಿಟ್ಟು, ಊರು ಬಡ್ದು ಉಗಾದಿ ಹಬ್ಬ ಮಾಡಿದವಳನ್ನು ಕಟ್ಟಿಕೊಂಡು ಬಂದು ಪಲ್ಲಂಗದಮೇಲೆ ಕೂಡ್ರಿಸಿಕೊಂಡಾನ ಇವನ್ದೆಂಥಾ ಮರುಳೋ..? ಎಂದು ಹಾಡಿಕೊಂಡರು. ಈ ಮೂರು ನೆಲೆಯಲ್ಲಿಯೂ ಮಾನ ಕಳೆದುಕೊಂಡಿದ್ದು ಹೆಣ್ಣೇ..!

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button