ಮನ್ ಕಿ ಬಾತ್ ಸಂಖ್ಯೆ ಏರಿದಂತೆ ಪೆಟ್ರೋಲ್, ಸಿಲೆಂಡರ್ ಬೆಲೆಗಳೂ ಏರುತ್ತಿವೆ – ಬಂಟಿ ಪಾಟೀಲ ವ್ಯಂಗ್ಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಸಂಖ್ಯೆ ಏರಿದಂತೆ ದೇಶದಲ್ಲಿ ಪೆಟ್ರೋಲ್, ಸಿಲೆಂಡರ್ ಮೊದಲಾದವುಗಳ ಬೆಲೆ ಕೂಡ ಏರುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ, ಶಾಸಕ ಸತೇಜ್ ಪಾಟೀಲ್ ಉರ್ಫ್ ಬಂಟಿ ಪಾಟೀಲ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆನಕನಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮೊದಲ ಮನ್ ಕೀ ಬಾತ್ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ 51 ರೂ. ಇತ್ತು, ನೂರನೇ ಮನ್ ಕೀ ಬತ್ ನಲ್ಲಿ 110 ರೂ. ಆಗಿದೆ. ಸಿಲೆಂಡರ್ ಬೆಲೆ ಮೊದಲ ಮನ್ ಕೀ ಬಾತ್ ನಲ್ಲಿ 400 ರೂ. ಇತ್ತು, 100 ನೇ ಮನ್ ಕೀ ಬಾತ್ ಹೊತ್ತಿಗೆ 1200 ರೂ ಆಗಿದೆ. ಇನ್ನೆೆಷ್ಟು ಮನ್ ಕೀ ಬಾತ್ ಬರುತ್ತದೆಯೋ ಗೊತ್ತಿಲ್ಲ ಎಂದು ಅವರು ಹೇಳಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಹಿಂದಿನ ಚುನಾವಣೆಗೂ ಮುನ್ನ ನಿಮಗೆ ಕೊಟ್ಟಿದ್ದ ವಚನವನ್ನು ಪೂರ್ಣಗೊಳಿಸಿಯೇ ನಿಮ್ಮ ಮುಂದೆ ಮತ್ತೆ ಬಂದು ನಿಂತಿದ್ದೇನೆ. ಮಾತು ಕೊಟ್ಟಂತೆ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಕ್ಷೇತ್ರಕ್ಕೆ ಬೃಹತ್ ಕೈಗಾರಿಕೆ, ಉನ್ನತ ಶಿಕ್ಷಣ ಸಂಸ್ಥೆ ತರುವ ಉದ್ದೇಶವಿದೆ. ಆದರೆ ವಿರೋಧ ಪಕ್ಷದಲ್ಲಿದ್ದಿದ್ದರಿಂದ ಅದು ಸಾಧ್ಯವಾಗಿಲ್ಲ. ಅವುಗಳನ್ನೂಶೀಘ್ರವೇ ಈಡೇರಿಸುತ್ತೇನೆ. ನನಗೆ ಇಚ್ಚಾಶಕ್ತಿ ಇದೆ ಹಾಗಾಗಿ ಕೆಲಸ ಮಾಡಿದ್ದೇನೆ. ನಿಮ್ಮ ಮಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ ಎಂದರು.
ಜಾತಿ, ಭಾಷೆ ಯಾವುದನ್ನೂ ನೋಡದೇ ನಾನು ಕೆಲಸ ಮಾಡಿದ್ದೇನೆ. ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಿಸಿದ್ದೇನೆ. 11 ಅಂಬೇಡ್ಕರ್ ಭವನ, 5 ವಾಲ್ಮೀಕಿ ಭವನ, ಕೃಷ್ಣ ಭವನ, ವಾರ್ಕರಿ ಭವನ ಮಾಡಿದ್ದೇನೆ. ಬ್ರಿಜ್ ಕಂ ಬಾಂದಾರಾ, ಬಸವೇಶ್ವರ ಮೂರ್ತಿ, ಚನ್ನಮ್ಮ ಮೂರ್ತಿ ಏನೆಲ್ಲ ಮಾಡಿದ್ದೇನೆ ಎಂದು ಅವರು ಹೇಳಿದರು.
ಕೊರೋನಾ ಸದರ್ಭದಲ್ಲಿ ಈಗಿನ ಪಕ್ಷೇತರ ಅಭ್ಯರ್ಥಿ ಆರ್.ಎಂ.ಚೌಗಲೆ, ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ್ ಎಲ್ಲಿದ್ದರು? 4 ತಿಂಗಳಿಂದ ಅವರೆಲ್ಲ ಕಾಣಿಸುತ್ತಿದ್ದಾರೆ. ಪೊಸ್ಟರ್ ಗಳಲ್ಲಿ ಮಾತ್ರ ಕಾಣಿಸುತ್ತಿದ್ದಾರೆ. ನಿಮ್ಮ ಕಷ್ಟ -ಸುಖದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಹೊರತು ಯಾರೂ ಬಂದಿಲ್ಲ, ಬರುವುದಿಲ್ಲ. ಚುನಾವಣೆ ಮುಂಗಿಯುತ್ತಿದ್ದಂತೆ ಇವರೆಲ್ಲ ನಾಪತ್ತೆಯಾಗುತ್ತಾರೆ. ಮೊಬೈಲ್ ಸ್ವಿಚ್ಡ್ ಆಫ್ ಆಗುತ್ತದೆ. ನಾನು ನಮ್ಮ ಸರಕಾರ ಇಲ್ಲದ ಸಂದರ್ಭದಲ್ಲಿ ಶಾಸಕಿಯಾಗಿ ಕಷ್ಟಪಟ್ಟಿದ್ದೇನೆ. ಇಲ್ಲದ ಆರೋಪಗಳನ್ನು ಎದುರಿಸಿದ್ದೇನೆ. ಎಷ್ಟು ಕಷ್ಟ ಕೊಡಬೇಕೋ ಕೊಟ್ಟಿದ್ದಾರೆ. ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ಇನ್ನಷ್ಟು ಯೋಜನೆಗಳನ್ನು ಕ್ಷೇತ್ರಕ್ಕೆ ತರಲಿದ್ದೇನೆ ಂದೂ ಹೆಬ್ಬಾಳಕರ್ ಹೇಳಿದರು.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ, ಮಾಜಿ ಮಂತ್ರಿ ವಿಶ್ವಜೀತ್ ಕದಂ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಸ್ಥಳೀಯ ಮುಖಂಡರಾದ ಯುವರಾಜ ಕದಂ, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಅಡಿವೇಶ ಇಟಗಿ, ಸಾತೇರಿ ಬೆಳವಟ್ಕರ್, ಮಲ್ಲೇಶ ಚೌಗಲೆ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ