Latest

ಕಾಂಗ್ರೆಸ್ ಸರಕಾರ ಬಂದ ಕೂಡಲೇ ಕನ್ನಡ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣ ರದ್ದು – ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಸ್ಥಾಪನೆಯಾಗಿ 25 ವರ್ಷಗಳು ಪೂರೈಸಿದೆ. ನಾನಿಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಕೇಂದ್ರ ಸರ್ಕಾರ ನನ್ನ ಮೇಲೆ ಇಡಿ, ಐಟಿ ದಾಳಿ ನಡೆಸಿ, ಬಂಧಿಸಿ ಜೈಲಿಗೆ ಹಾಕಿದಾಗ ನೀವು ಪ್ರತಿಭಟನೆ ಮಾಡಿ ನನ್ನ ಬೆಂಬಲಕ್ಕೆ ನಿಂತಿದ್ದೀರಿ. ನನ್ನ ಹಾಗೂ ನಿಮ್ಮ ಸಂಬಂಧ ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧವಿದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನೀವು ಅನೇಕ ನಾಯಕರನ್ನು ನೋಡಿದ್ದೀರಿ. ಅಧಿಕಾರ ಬರುತ್ತದೆ, ಹೋಗುತ್ತದೆ. ಸಂಘಟನೆ, ಪಕ್ಷವನ್ನು ಐದು ವರ್ಷಗಳ ಕಾಲ ಉಳಿಸಿಕೊಂಡು ಹೋಗುವುದು ಬಹಳ ಕಷ್ಟ. ಅನೇಕ ಪ್ರಾದೇಶಿಕ ಪಕ್ಷಗಳು ಬಂದು ಹೋಗಿರುವುದು ಇದಕ್ಕೆ ಸಾಕ್ಷಿ. ಜನ ಸಂಘ ಬಿಜೆಪಿ ಆಗಿ, ಜನತಾ ಪಕ್ಷ, ಜೆಡಿಎಸ್ ಆಗಿ ಬೇರೆ ಬೇರೆ ರೀತಿ ಮಾರ್ಪಾಡಾಗಿವೆ. ನಮ್ಮದು ನೂರಾರು ವರ್ಷಗಳ ಇತಿಹಾಸ ಇರುವ ಪಕ್ಷ. ನಾವು ಅಧಿಕಾರ ನೋಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರಾಗಬೇಕು ಎಂದು ಅನೇಕರಿಗೆ ಆಸೆ ಇರುತ್ತದೆ. ಅದಕ್ಕಾಗಿ ಒಂದು ಸಿದ್ಧಾಂತದ ಮೇಲೆ ಹೋರಾಟ ಮಾಡಿಕೊಂಡು ಬರುತ್ತಿರುತ್ತಾರೆ. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಒಂದಲ್ಲ ಒಂದು ಸ್ಥಾನ ಪಡೆಯಲು ಹೋರಾಟ ಮಾಡಲಾಗುತ್ತದೆ. ಆದರೆ ನೀವು ಅಧಿಕಾರದ ಆಸೆ ಇಲ್ಲದೆ, ನಾವು ಈ ನೆಲದಲ್ಲಿ ಹುಟ್ಟಿ, ಇಲ್ಲಿ ಹರಿಯುವ ನೀರು ಕುಡಿದು, ಗಾಳಿ ಸೇವಿಸುತ್ತಿದ್ದೇವೆ, ಭಾಷೆ ಮಾತನಾಡುತ್ತಿದ್ದೇವೆ, ಇವುಗಳ ರಕ್ಷಣೆ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದೀರಿ ಎಂದರು.

ನಾನು ರಾಜಕೀಯವಾಗಿ ಅನೇಕ ಕೇಸ್ ಹಾಕಿಸಿಕೊಂಡು ಜಜ್ಜಿಸಿಕೊಂಡಿದ್ದೇನೆ. ಅದೇ ರೀತಿ ನೀವು ಕನ್ನಡ ಭಾಷೆ ವಿಚಾರದಲ್ಲಿ ಹೋರಾಟ ಮಾಡಿ ಕೇಸು ಹಾಕಿಸಿಕೊಂಡು ಹೋರಾಟ ಮಾಡುತ್ತಿದ್ದೀರಿ. ನಾರಾಯಣ ಗೌಡರ ಮೇಲೆ 67-68 ಪ್ರಕರಣಗಳು ದಾಖಲಾಗಿವೆ. ಇದ್ಯಾವುದಕ್ಕೂ ಬಗ್ಗದೆ ನೀವು ಈ ನಾಡು, ನುಡಿ, ನೀರಿನ ವಿಚಾರವಾಗಿ ಹೋರಾಟ ಮಾಡುತ್ತಿದ್ದೀರಿ. 25 ವರ್ಷಗಳಿಂದ ಹೋರಾಟ ಮಾಡಿಕೊಂಡು ವಿಶ್ವದಾದ್ಯಂತ 50 ಲಕ್ಷ ಸದಸ್ಯರನ್ನು ಹೊಂದಿದ್ದು, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದು ಸುಲಭದ ಮಾತಲ್ಲ. ಇದಕ್ಕಾಗಿ ನಿಮ್ಮ ಅಧ್ಯಕ್ಷರಿಗೆ ದೊಡ್ಡ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನಮ್ಮ ಮಾವನವರು ಒಂದು ಮಾತು ಹೇಳುತ್ತಿದ್ದರು, ನೂರು ಜೋಡಿನ ಏಟು ತಿನ್ನಬಹುದು, ಆದರೆ ದುಡ್ಡಿನ ಏಟು ತಿನ್ನಲು ಸಾಧ್ಯವಿಲ್ಲ ಎಂದು. ಈ ವಿಚಾರದಿಂದ ರಾಜಕೀಯ ಪಕ್ಷಗಳನ್ನು ಉಳಿಸಿಕೊಳ್ಳೋದು ಕಷ್ಟ. ಅಂತಹದರಲ್ಲಿ ನಾರಾಯಣಗೌಡರು ನಿಮ್ಮೆಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹತ್ತಾರು ಬೇರೆ ಸಂಘಟನೆ ಸದಸ್ಯರು ನಮ್ಮ ಬಳಿ ಬರುತ್ತಾರೆ. ಆಗ ನಾನು ಅವರಿಗೆ ನೀವು ನಿಮ್ಮ ಬೇರು ಮರೆತರೆ ಫಲ ಸಿಗುವುದಿಲ್ಲ ಎಂದು ಹೇಳುತ್ತಿರುತ್ತೇನೆ. ನಿಮಗೆ ಯಾರು ಸಹಾಯ ಮಾಡುತ್ತಾರೆ, ಬೆಳೆಸುತ್ತಾರೆ ಅವರನ್ನು ಮರೆಯಬೇಡಿ ಎಂದು ಹೇಳಿದ್ದೇನೆ.

ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದೇ ರೀತಿ ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೀರಿ. ಇದೇ ಒಗ್ಗಟ್ಟು ಮುಂದುವರಿಸಿಕೊಂಡು ಹೋಗಿ. ನಾನು ಕೂಡ ನಿಮ್ಮ ಕುಟುಂಬದವನು. ನಿಮ್ಮಲ್ಲಿ ನಾನು ಒಬ್ಬನಾಗಿ ಇಲ್ಲಿಗೆ ಬಂದಿದ್ದೇನೆ. ಹೋರಾಟವೇ ನಿಮ್ಮ ಜೀವಾಳ. ಹೋರಾಟಗಾರ ಸೋಲಿಗೆ, ಸಾವಿಗೆ, ಪ್ರಕರಣಗಳಿಗೆ ಹೆದರುವುದಿಲ್ಲ ಎಂದರು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂದು ಬಹಳ ಮುಖ್ಯ. ಅದೇ ರೀತಿ ನೀವು ಕನ್ನಡ ತಾಯಿಯ ಋಣ ತೀರಿಸಲು ಈ ಕೆಂಪು ಹಳದಿ ಧ್ವಜ ಹಿಡಿದು ಹೋರಾಟ ಮಾಡುತ್ತಿದ್ದೀರಿ. ದೇಶಕ್ಕೆ ರಾಷ್ಟ್ರಧ್ವಜ ಹೇಗೆ ಮುಖ್ಯವೋ ಅದೇ ರೀತಿ ನಮಗೆ ಈ ನೆಲಕ್ಕೆ ಈ ಧ್ವಜ ಮುಖ್ಯ.

ದೇವರು ನಿಮಗೆ ವರವನ್ನು ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಿಮಗೆ ಸಿಕ್ಕಿರುವ ಅವಕಾಶದಲ್ಲಿ ಕನ್ನಡ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು.

ನಿಮಗೆ ಜಾತಿ, ಧರ್ಮದ ಬೇಧವಿಲ್ಲ. ಕನ್ನಡವೇ ನಿಮ್ಮ ಜಾತಿ ಹಾಗೂ ಧರ್ಮ. ಕನ್ನಡಿಗರ ಪ್ರೀತಿ ಅಭಿಮಾನದಿಂದ ಈ ಸಂಘಟನೆ ಬೆಳ್ಳಿ ಹಬ್ಬ ಸಂಭ್ರಮ ಆಚರಿಸುತ್ತಿದೆ. ನಾರಾಯಣ ಗೌಡರ ನಾಯಕತ್ವದಲ್ಲಿ ನಾನು ನಿಮ್ಮ ಜತೆ ಇರುತ್ತೇನೆ. ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಮೊದಲು ನಿಮ್ಮ ಮೇಲಿರುವ ಎಲ್ಲ ಪ್ರಕರಣಗಳನ್ನು ರದ್ದು ಮಾಡುತ್ತೇವೆ.

ದೇಶಕ್ಕಾಗಿ ಜನರಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ ರಾಹುಲ್ ಗಾಂಧಿ ಅವರಿಗೆ ಯಾವುದೋ ಭಾಷಣ ವಿಚಾರಕ್ಕೆ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪನ್ನು ತಡೆ ಹಿಡಿದಿದ್ದರೂ ಸಂಸತ್ತಿನಲ್ಲಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದಾರೆ. ಇದೆಲ್ಲದರಿಂದ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಏನಾಗುತ್ತಿದೆ ಎಂದು ಚರ್ಚೆ ಆಗುತ್ತಿದೆ. ಈ ವೇದಿಕೆಯಲ್ಲಿ ಆ ವಿಚಾರ ಹೆಚ್ಚು ಚರ್ಚೆ ಮಾಡುವುದಿಲ್ಲ. ನಾನು ದೆಹಲಿ ಸಭೆಯಲ್ಲಿ ಭಾಗವಹಿಸಬೇಕಿದೆ ಎಂದರು.

https://pragati.taskdun.com/karnataka-vidhanasabha-electionelection-commissionlatter/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button