ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೀವದ ಹಂಗುತೊರೆದು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿ ದಾಟಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆಯನ್ನ ಆರೋಗ್ಯ ಸಚಿವ ಶ್ರೀರಾಮುಲು ಶ್ಲಾಘಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶ್ರೀರಾಮುಲು, “ಕೊರೊನದಂತಹ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದು ಹೇಳಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ಕೊರಗ ಕಾಲೋನಿಯಲ್ಲಿ ವಾಸಿಸುವ ಸುಮಾರು 40ಕ್ಕೂ ಹೆಚ್ಚಿನ ಕುಟುಂಬಗಳಲ್ಲಿ ಕೆಲವರಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಆ ಭಾಗದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ರಭಸವಾಗಿ ಹರಿಯುವ ನದಿಯನ್ನು ಕಿರಿದಾದ ಕಾಲುಸೇತುವೆಯ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡು ದಾಟಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ.
ಗ್ರಾಮಗಳಲ್ಲಿ ರೋಗಗಳ ಕುರಿತು ಮುಂಜಾಗ್ರತೆ ವಹಿಸುವಂತೆ ಅರಿವು ಮೂಡಿಸಿ ಬಂದಿದ್ದಾರೆ. ಅವರ ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಆಶಾ ಕಾರ್ಯಕರ್ತೆಯರ ಸೇವೆಗೆ ಸಚಿವ ಶ್ರೀರಾಮುಲು ಗೌರವ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ