*ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ಮುನ್ನುಡಿ ಬರೆದ ಬೆಳಗಾವಿ ಅಧಿವೇಶನ: ಗಾಂಧೀಜಿ ಸ್ವಾತಂತ್ರ್ಯ ಹೊರಾಟಕ್ಕೆ ಬಲ ತುಂಬಿತು: ಅಶೋಕ ಚಂದರಗಿ*

ಪ್ರಗತಿವಾಹಿನಿ ಸುದ್ದಿ: ಭಾರತವೆಂಬ ಈ ಪುಣ್ಯದ ನೆಲದಲ್ಲಿ ಜನಿಸಿದವರು ಯಾರೂ ಮಹಾತ್ಮಾ ಗಾಂಧೀಜಿಯವರನ್ನು ಅನುದಿನವೂ ನೆನೆಯದೇ ಇರಲು ಸಾಧ್ಯವೇ ಇಲ್ಲ. ಅಂತಹ ಮೇರು ನಾಯಕ ನಮ್ಮ ರಾಷ್ಟ್ರಪಿತ. ಅವರು ಈ ನಮ್ಮ ಕರುನಾಡಿನಲ್ಲಿ ಓಡಾಡಿದ್ದರು, ನಮ್ಮನ್ನು ಜಾಗೃತಗೊಳಿಸಿದ್ದರು. ಸ್ವಾತಂತ್ರ್ಯದ ಬೀಜ ಬಿತ್ತಿದ್ದರು ಎಂಬುದೆಲ್ಲಾ ಮೈನೆವರೇಳಿಸುವ ಸಂಗತಿ.ಕನ್ನಡಿಗರು ಮರಾಠಿಗರು ಕೂಡಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.ಇಂದು ಭಾಷೆ ಮತ್ತು ಗಡಿ ವಿವಾದಕ್ಕೆ ಬೆಳಗಾವಿಯನ್ನು ಗುರಿಮಾಡುವುದು ಸರಿಯಲ್ಲ.ಬೆಳಗಾವಿಯಲ್ಲಿ ಪಂಚ ಭಾಷಿಕ ಜನರು ಎಲ್ಲ ಧರ್ಮ ಜನಾಂಗ ಜಾತಿಯ ನಾವೆಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ.
1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಈ ನೆಪದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ, ಮಹಾತ್ಮ ಗಾಂಧೀಜಿ ಆವರಿಸಿಕೊಳ್ಳತ್ತಾರೆ. ನಮ್ಮವರ ಹೋರಾಟದ ಕಿಚ್ಚು ಎಲ್ಲಿಲ್ಲದಂತೆ ಕಾಡುತ್ತದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದು, ನಮ್ಮ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ. ಇದು ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನವೂ ಹೌದು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೇತೃತ್ವದಲ್ಲಿ ನಡೆದ ಮೊತ್ತ ಮೊದಲ ರಾಷ್ಟ್ರೀಯ ಕಾರ್ಯಕ್ರಮ. ನಾಡಿನ ಏಕೀಕರಣದ ಹೋರಾಟಕ್ಕೆ ಅಧಿಕೃತ ಚಾಲನೆ ನೀಡಿದ. ಪ್ರೇರಣೆ ನೀಡಿದ ಅಧಿವೇಶನ ಎಂದು ಶ್ರೀ ಅಶೋಕ ಚಂದರಗಿ ನುಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೆಳಗಾವಿ ಹಾಗೂ ಎಕ್ಸಪರ್ಟ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯ . ಬೆಳಗಾವಿ ಇವರ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಮಾಲಿಕೆ -೧೨ ಕಾರ್ಯಕ್ರಮ
ಗುರುವಾರ, ದಿನಾಂಕ: ೩೦- ೧೦-೨೦೨೫ ದಂದು ಎಕ್ಸಪರ್ಟ ಪಿ.ಯು.ಸಿ ಕಾಲೇಜು ಸಭಾಂಗಣ. ಡಾ .ಬಿ.ಡಿ ಜತ್ತಿ ಕಾಲೇಜು ಆವರಣ. ಸಿವಿಲ್ ಆಸ್ಪತ್ರೆ ರೋಡ್ ,ಅಯೋಧ್ಯಾ ನಗರ .ಬೆಳಗಾವಿಯಲ್ಲಿ ಯಶಸ್ವಿಯಾಗಿ ಜರುಗಿತು.
ಗಾಂಧೀಜಿ ನೂರರ ನೆನಪು : ಬೆಳಗಾವಿ ಅಧಿವೇಶನ ವಿಷಯ ಕುರಿತಾಗಿ. ಗಡಿ ಅಭಿವೃದ್ಧಿ ಪ್ರಾಧಿಕಾರ ,
ಕರ್ನಾಟಕ ಸರಕಾರ. ಬೆಂಗಳೂರು ಸದಸ್ಯರಾದ ಶ್ರೀ ಅಶೋಕ ಚಂದರಗಿ ಅವರು ವಿಶೇಷ ಉಪನ್ಯಾಸ ನೀಡುತ್ತ.1921ರ ಸೆಪ್ಟೆಂಬರ್ 19, ಡಿಸೆಂಬರ್ 15 ಹಾಗೂ 1922ರ ಫೆಬ್ರವರಿ 23ರ ‘ಯಂಗ್ ಇಂಡಿಯಾ’ ದ ಸಂಚಿಕೆಗಳಲ್ಲಿ ದೇಶದ್ರೋಹಿ ಲೇಖನಗಳನ್ನು ಬರೆದಿದ್ದಾರೆಂಬ ಕಾರಣ ನೀಡಿ ಮಹಾತ್ಮ ಗಾಂಧೀಜಿಯವರನ್ನು ಬ್ರಿಟಿಷ್ ಸರ್ಕಾರ 1922ರ ಮಾರ್ಚ್ 10 ರಂದು ಬಂಧಿಸಿ ಯರವಾಡ ಜೈಲಿನಲ್ಲಿ ಇರಿಸಿತ್ತು. ಅಲ್ಲಿಯವರೆಗೆ ಗಾಂಧೀಜಿಯವರು ಮುನ್ನಡೆಸುತ್ತಿದ್ದ ಅಸಹಕಾರ ಚಳವಳಿಗೆ ದಿಕ್ಕಿಲ್ಲದಂತಾಗಿತ್ತು. ಇದಾದ ನಂತರ ಸ್ವಾತಂತ್ರ್ಯ ಸಂಗ್ರಮದ ನಿರ್ಣಾಯಹ ಹೋರಾಟದ ಒಗ್ಗಟ್ಟಿನ ಬಲಕ್ಕೆ ಬೆಳಗಾವಿ ಅಧಿವೇಶನ ಸಾಕ್ಷಿಯಾಯಿತು.
ನಮ್ಮ ಬೆಳಗಾವಿಯಲ್ಲಿ 1924ರಲ್ಲಿ ನಡೆದ 39ನೇ ಕಾಂಗ್ರೆಸ್ ಅಧಿವೇಶನ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿಯೇ ವಿಶೇಷವಾದ ಅಧಿವೇಶನ. ಅತೀ ಮಹತ್ವದ ಕಾಲಘಟ್ಟದಲ್ಲಿ ನಡೆದ ಬೆಳಗಾವಿ ಅಧಿವೇಶನ ಇದು ನಮ್ಮ ರಾಜ್ಯದಲ್ಲಿ ನಡೆದ ಏಕೈಕ ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ ಅಧಿವೇಶನ . ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಈ ಅಧಿವೇಶನ ಸ್ವಾತಂತ್ರ್ಯ ಹೋರಾಟದ ಸ್ವರೂಪವನ್ನೇ ಬದಲಾಯಿಸಿತ್ತು.ನಮ್ಮ ರಾಜ್ಯದಲ್ಲಿ ಕೂಡ ಹೋರಾಟ ತೀವ್ರಗೊಂಡಿತ್ತು.ಸ್ವಾತಂತ್ರ್ಯ ಸಂಗ್ರಾಮದ ಜೊತೆಯಲ್ಲಿಯೇ ಕರ್ನಾಟಕ ಏಕೀಕರಣದ ಚಳುವಳಿಯು ತೀವ್ರವಾಗಿತ್ತು.ಹುಯಿಲಗೋಳ ನಾರಾಯಣರಾವ್ ಅವರು ಬರೆದ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಗೀತೆಯನ್ನು ಅಂದು ೧೩ ವರ್ಷದ ಬಾಲಕಿ ಗಂಗೂಬಾಯಿ ಹಾನಗಲ್ಲ ಅವರು ಪ್ರಾರ್ಥನೆ ರೂಪದಲ್ಲಿ ಪ್ರಸ್ತುತ ಪಡಿಸಿದ್ದು,
ಗಾಂಧೀಜಿಯವರಿಗೆ ಅಪಾರ ಅಭಿಮಾನ ಉಂಟುಮಾಡಿತ್ತು ಬಹಳ ಮುಖ್ಯವಾಗಿ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮೂಡಿತ್ತು. ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದ ಕಾಂಗ್ರೆಸ್ ನಾಯಕರು ಸ್ವರಾಜ್ಯಕ್ಕಾಗಿ ಒಂದಾಗಿದ್ದರು. ಕಾಂಗ್ರೆಸ್‌ನ ನಾಯಕತ್ವದ ಜವಾಬ್ದಾರಿ ಮಹಾತ್ಮ ಗಾಂಧೀಜಿಯವರ ಹೆಗಲೇರಿತ್ತು. ಕಾಂಗ್ರೆಸ್ ಪಕ್ಷ ಇನ್ನೇನು ಇಬ್ಬಾಗವಾಗುತ್ತದೆ ಎಂಬ ಅಭಿಪ್ರಾಯ ಬಲವಾಗುತ್ತಿದ್ದ ಹೊತ್ತಿನಲ್ಲಿ ನಡೆದ ಈ ಅಧಿವೇಶನ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿಯೂ ಮಹತ್ವದ ಅಧಿವೇಶನವೆಂದೇ ಹೇಳಬೇಕು. ಅಂದು ಮೈಸೂರು ಸಂಸ್ಥಾನದ ಭಾಗಗಳು ಹಾಗೂ ಮುಂಬಯಿ ಪ್ರಾಂತದ ಬೆಳಗಾವಿ ಭಾಗಗಳು ಮತ್ತು ಸಾಂಗ್ಲಿ ಸಂಸ್ಥಾನದ ಶಹಾಪುರ ಭಾಗಗಳು ಹೋರಾಟದ ಪ್ರಮುಖ ಸ್ಥಾನಗಳಾಗಿದ್ದವು.
ಈ ಅಧಿವೇಶನಕ್ಕೆ ಒಟ್ಟು ಖರ್ಚಾದ ಹಣ ರೂಪಾಯಿಗಳಾದ 2, 20,829, 5 ಆಣೆ 6 ಪೈಸೆಯಾದರೆ, ಉಟೋಪಚಾರಕ್ಕೆ ಒಟ್ಟು
28,317, 7 ಆಣೆ 6 ಪೈಸೆ ಹಾಗೂ ಗಾಂಧೀಜಿ ಮತ್ತು ಸಹಚರರಿಗೆ 394 ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು.ವಿಜಯನಗರ ಎಂದು ಅಧಿವೇಶನದ ಜಾಗಕ್ಕೆ ನಾಮಕರಣ ಮಾಡಿ ವೀರುಪಾಕ್ಷ ದೇವಾಲಯದ ಗೋಪುರವನ್ನು ಹೋಲುವ ಮಹಾದ್ವಾರ ನಿರ್ಮಿಸಿದ್ದರು.
ಗಾಂಧೀಜಿಯವರು ಸರೋಜಿನಿ ನಾಯ್ಡು ಹಾಗೂ ಪ್ರಮುಖ ಮುಖಂಡರುಗಳು ಉಳಿದುಕೊಂಡ ಸ್ಥಳಕ್ಕೆಹಾಗೂ ವೇದಿಕೆಗೆ ವಿದ್ಯಾರಣ್ಯ ಆಶ್ರಮ ಎಂದು ನಾಮಕರಣ ಮಾಡಿದ್ದರುಅಧಿವೇಶನಕ್ಕೆ ಬರುವ ಜನರ ನೀರಿಗಾಗಿ ಪಂಪಾ ಸರೋವರವೆಂಬ ಬಾವಿಯನ್ನು ನಿರ್ಮಿಸಿದ್ದು ಈಗ ಅದು ಕಾಂಗ್ರೆಸ್ ಬಾವಿಯೆಂದೇ ಪ್ರಸಿದ್ದವಾಗಿದೆ.
ಆ ದಿನಗಳಲ್ಲಿ ವಿದ್ಯುತ್ ವ್ಯವಸ್ಥೆ ಕೇವಲ ಗೋಕಾಕ ಮಿಲ್ ನಲ್ಲಿ ಮಾತ್ರ ಇತ್ತು ಹೀಗಾಗಿ 250 ಪೇಟ್ರೊಮ್ಯಾಕ್ಸಗಳನ್ನು ಹಾಗೂ 1000 ಲಾಟೀನ್ ಗಳನ್ನು ಮಹಾರಾಷ್ಟ್ರ ಭಾಗದಿಂದ ತರಿಸಿದ್ದರು.ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಬೆಳಗಾವಿಯ ಕನ್ನಡ ಕ್ರಿಯಾ ಸಮೀತಿಯ ಅಧ್ಯಕ್ಷರಾದ ಕನ್ನಡಪರ ಹೋರಾಟಗಾರರಾದ ಶ್ರೀ ಅಶೋಕ ಚಂದರಗಿಯವರು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಸದಸ್ಯರಾದ   ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಆಶಯ ನುಡಿಗಳನ್ನಾಡುತ್ತ. ಗಾಂಧೀಜಿಯವರ ನಡೆದಾಡಿದ ಈ ನೆಲದಲ್ಲಿ ನಾವು ಬದುಕುತ್ತಿದ್ದೇವೆ ಎಂಬುದೇ ರೋಮಾಂಚಕಾರಿ ವಿಷಯ  ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರ ನುಡಿದ ಭಾಷಣದ ಆಶಯದಂತೆ ಅಸ್ಪೃಶ್ಯತೆಯನ್ನು ನಿವಾರಿಸುವ, ಪ್ರಜಾತಂತ್ರವನ್ನು ಗಟ್ಟಿಗೊಳಿಸುವ ಮತ್ತು ರಾಷ್ಟ್ರೀಯ  ಏಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ದಿಟ್ಟ ಹೆಜ್ಜೆ ಇಡೋಣ. ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮ ಗಾಂಧೀಜಿಯವರ ಭಾಷಣವು ಸಂಪೂರ್ಣ ಪ್ರಜಾಪ್ರಭುತ್ವದ ನುಡಿಗಳಾಗಿದ್ದವು.ಈ ಅಧಿವೇಶನದಲ್ಲಿ ತೆಗೆದುಕೊಳ್ಳಲಾದ ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ ನಿರ್ಣಯಗಳು, ಚರಕದ ಬಳಕೆ ಮೂಲಕ ದೇಶದ ಜನರಲ್ಲಿ ಸ್ವಾಭಿಮಾನವನ್ನು ಉದ್ದೀಪನಗೊಳಿಸಲು ಪ್ರಕಟಿಸಿದ ಕಾರ್ಯಕ್ರಮಗಳು, ಅಹಿಂಸೆಯ ಹೋರಾಟ ಮತ್ತು ಅಸ್ಪೃಶ್ಯತೆ ವಿರುದ್ಧದ ದನಿಗಳು ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೇ ಬದಲಾಯಿಸಿದ್ದವು. ಅಧಿವೇಶನದ ನಂತರ ಮಹತ್ವದ ಕ್ರಾಂತಿಕಾರಕವೆನಿಸುವ ಬದಲಾವಣೆಗಳು ಈ ದೇಶದಲ್ಲಾದವು ಹೀಗಾಗಿ ಇದೊಂದು ಬಹಳ ಮಹತ್ವದ ಅಧಿವೇಶನ.ಅಧಿವೇಶನದ ಫಲವಾಗಿ ಸ್ವಾತಂತ್ರ್ಯ ಹೋರಾಟ ದೇಶದ ತುಂಬೆಲ್ಲ ಹಬ್ಬಿತ್ತು. 
  ಬೆಳಗಾವಿಯ ಇತಿಹಾಸವನ್ನು ನಾವು ತೆಗೆದು ನೋಡಿದರೆ ಈ 24ನೇ ಇಸವಿಗೆ ಬಹಳ ಮಹತ್ವವಿದೆ. ನಮಗೆಲ್ಲರಿಗೂ ತಿಳಿದಿರುವಂತೆ 1824ರ ಅಕೋಬರ್‌ನಲ್ಲಿ ಬ್ರಿಟಿಷ್ ಅಧಿಕಾರಿ (ಧಾರವಾಡದ ಕಲೆಕ್ಟರ್ ಆಗಿದ್ದ) ಥ್ಯಾಕರೆ ಕಿತ್ತೂರಿಗೆ ಬರುತ್ತಾನೆ. ಅಕ್ಟೋಬರ್ 24ರಂದು ಆತನ ಹತ್ಯೆ ನಡೆಯುತ್ತದೆ. ಆಮೇಲೆ ಡಿಸೆಂಬರ್ 3 ರಂದು ಅಪಾರ ಪ್ರಮಾಣದ ಸೇನೆಯೊಂದಿಗೆ ಬ್ರಿಟೀಷರು ದಾಳಿ ಮಾಡುತ್ತಾರೆ. ಡಿಸೆಂಬರ್ 5 ರಂದು ವೀರರಾಣಿ ಕಿತ್ತೂರು ಚೆನ್ನಮ್ಮಳನ್ನು ಬಂಧಿಸಲಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರು ರಾಣಿಯ ಈ ಹೋರಾಟ ಐತಿಹಾಸಿಕವಾದದ್ದು. ಇದಾಗಿ ಸರಿಯಾಗಿ ನೂರು ವರ್ಷಕ್ಕೆ ಅಂದರೆ 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ ನಡೆಯುತ್ತದೆ. ಅದೂ ಡಿಸೆಂಬರ್ ತಿಂಗಳಿನಲ್ಲೇ! ಇದೂ ಕೂಡ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ತಿರುವು ನೀಡುತ್ತದೆ. ನಾವೀಗ 2024ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದ್ದೇವೆ. ಈ ಬಾರಿಯ 2024 ಕೂಡಾ ಮಹತ್ವದ ಐತಿಹಾಸಿಕ ದಿನವಾಗಿ ಅವಿಸ್ಮರಣೀಯವಾಗಿದೆ.ಬೆಳಗಾವಿಗೆ ಬಂದಾಗ ಗಾಂಧೀಜಿಯವರು ಹುದಲಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದಾಗ ಅನೇಕ ದೇಶ ಭಕ್ತರು ತಮ್ಮ ಮಕ್ಕಳಿಗೆ ಗಾಂಧೀಜಿಯರಿಂದ ನಾಮಕರಣ ಮಾಡಿಸಿದರು.ಸ್ವದೇಶ ಚಳುವಳಿ ಮತ್ತು ಚರಕಾ ಅಭಿಯಾನಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಹುದಲಿಯಲ್ಲಿ ಖಾದಿ ಗ್ರಾಮೋದ್ಯೋಗಕ್ಕೆ ಉತ್ತೇಜಿಸುವ ಮೂಲಕ ಅಸಹಕಾರ ಚಳಿವಳಿಗೆ ಹೊಸ ಆಯಾಮ ಒದಗಿಸಿದರು. ಎಂದು ಅಕಾಡೆಮಿ ಸದಸ್ಯೆ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ತಮ್ಮ ಆಶಯ ನುಡಿಗಳಲ್ಲಿ ಗಾಂಧೀಜಿಯವರ ಬೆಳಗಾವಿ ಅಧಿವೇಶನದ ಮಹತ್ವ ಕುರಿತಾಗಿ ಮಾತನಾಡಿದರು.
 ಅಧ್ಯಕ್ಷರು, ಎಕ್ಸಪರ್ಟ ಶಿಕ್ಷಣ ಸಂಸ್ಥೆ ಹಾಗೂ ಪದವಿಪೂರ್ವ ಮಹಾವಿದ್ಯಾಲಯ. ಬೆಳಗಾವಿಯ ಶ್ರೀವ ನಾಗೇಶ ದಂಡಾಪೂರೆ ಅಧ್ಯಕ್ಷೀಯ ಮಾತುಗಳನ್ನಾಡುತ್ತ, ಇಂದು ನಮ್ಮ ಮಹಾವಿದ್ಯಾಲಯದಲ್ಲಿ ಅಕಾಡೆಮಿಯ ಚಕೋರ ವೇದಿಕೆ ಆಯೋಜಿಸಿದ ಈ ಮಹತ್ವದ ಕಾರ್ಯಕ್ರಮಕ್ಕೆ ಬೆಳಗಾವಿಯ ನಾಡು ನುಡಿ ಹೋರಾಟಗಾರರು ಆಗಮಿಸಿದ್ದು ಅತೀವ ಸಂತೋಷ ತಂದಿದೆ.ಕಳೆದ ನೂರು ವರ್ಷಗಳ ಹಿಂದೆ ಈ ನೆಲದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಇಂತಹ ಕಥನಗಳು ಇಂದಿನ ಯುವಕರಲ್ಲಿ ದೇಶಭಕ್ತಿಯನ್ನು ತುಂಬುತ್ತವೆ.ನಾಗರಿಕತ್ವದ ಪ್ರಜ್ಞೆ ಇಂದಿನ ಯುವಕರಿಗೆ ಅತೀ ಅವಶ್ಯಕವಾಗಿದ್ದು ದೇಶದ ಸ್ವಾತಂತ್ರ್ಯ ಸಂಗ್ರಾಮದ ಇಂತಹ ವಿಷಯಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿವೆ.ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ ಗಾಂಧೀಜಿಯವರ ಬರುವ ಮೂಲಕ ಈ ಭಾಗದ ಹೋರಾಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿತು ಎಂದು ನುಡಿದರು.
ಜಿಲ್ಲಾ ಸಂಚಾಲಕರು, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಶ್ರೀ ಶಿವರಾಜ ಅರಳಿ ಅವರು ಅತಿಥಿಗಳನ್ನು ಪರಿಚಯಿಸಿ ಅಕಾಡೆಮಿಯ ಚಕೋರ ವೇದಿಕೆಯ ಕಾರ್ಯ ಸ್ವರೂಪ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರಾರ್ಥನೆಯನ್ನು ಪ್ರತೀಕ್ಷಾ ಮತ್ತು ಸಂಗಡಿಗರು ವಿದ್ಯಾರ್ಥಿಗಳು ,ಎಕ್ಸಪರ್ಟ ಪದವಿಪೂರ್ವ ಮಹಾವಿದ್ಯಾಲಯ ಇವರು ನೇರವೇರಿಸಿದರು.
ಕಾರ್ಯಕ್ರಮ ಸಂಯೋಜನೆಯನ್ನು ಸಂಜೀವ ಕರವೀನಕೊಪ್ಪ ಅಧ್ಯಾಪಕರು ಕನ್ನಡ ವಿಭಾಗ ಎಕ್ಸಪರ್ಟ ಪದವಿಪೂರ್ವ ಮಹಾವಿದ್ಯಾಲಯ ಇವರು ಮಾಡಿದರು.ಕಾಲೇಜೀನ ಬೋಧಕ ಸಿಬ್ಬಂದಿಗಳು ಹಾಗೂ ಸಾಹಿತ್ಯಾಸಕ್ತರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 
					 
				 
					 
					 
					 
					
 
					 
					 
					


