ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕದ ಟ್ರಕ್ ಚಾಲಕನ ಮೇಲೆ ಮಹಾರಾಷ್ಟ್ರದ ಸಾತಾರಾ
ಬಳಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭೂಂಜ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.
ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ಮೂಲದ ಟ್ರಕ್ ಚಾಲಕ ಗೋವಿಂದರಾಜು ಅವರ ಮೇಲೆ
ಮಹಾರಾಷ್ಟ್ರದ ಸಾತಾರಾ ಟೋಲ್ ಬಳಿ ನಿನ್ನೆ ಶುಕ್ರವಾರ ರಾತ್ರಿ 8 ಗಂಟೆಗೆ ಕನ್ನಡ ಮಾತನಾಡಿದ ಎನ್ನುವ ಕಾರಣಕ್ಕೆ 4 -5 ಜನರು ಸೇರಿ ಹಲ್ಲೆ ನಡೆಸಿದ್ದರು.
ಟ್ರಕ್ ಓವರ್ ಲೋಡ್ ದಂಡ ಕಟ್ಟುವ ಸಂಬಂಧ ವಿವಾದ ಆರಂಭವಾಗಿತ್ತು. ನಂತರ ಮಾತಿಗೆ ಮಾತು ಬೆಳೆದಿದೆ. ಚಾಲಕ ಕನ್ನಡದಲ್ಲಿ ಮಾತನಾಡಿದಾಗ ಆಕ್ಷೇಪಿಸಿದ ಪುಂಡರು, ಮರಾಠಿ ಅಥವಾ ಹಿಂದಿಯಲ್ಲಿ ಮಾತನಾಡುವಂತೆ ತಾಖೀತು ಮಾಡಿದ್ದಾರೆ. ಆತ ನನಗೆ ಕನ್ನಡ ಮಾತ್ರ ಬರುತ್ತದೆ ಎಂದಿದ್ದಕ್ಕೆ ಅವನ ಮೇಲೆ ಹಲ್ಲೆ ನಡೆಸಲಾಗಿದೆ.
ಹಲ್ಲೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಭೂಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಲ್ಕು
ಜನರನ್ನು ಶನಿವಾರ ಸಂಜೆ ಬಂಧಿಸಲಾಗಿದೆ.
ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠ ಲಕ್ಷ್ಮಣ ನಿಂಬರಗಿ ತಕ್ಷಣ ಕ್ರಮ ತೆಗೆದುಕೊಂಡು, ಚಾಲಕನ ಜೊತೆಗೆ ಕರ್ನಾಟಕದ ಪಿ.ಎಸ್.ಐ ಒಬ್ಬರನ್ನು ಇಂದು ಸಾತಾರಾಕ್ಕೆ ಕರೆದೊಯ್ದು ಮಹಜರು ನಡೆಸಲಾಯಿತು. ಭೂಂಜ್ ಪೋಲೀಸರಿಗೆ ದೂರು ನೀಡಲಾಯಿತು.
ಚಾಲಕನ ದೂರಿನ ಮೇರೆಗೆ ನಾಲ್ಕು ಜನರನ್ನು ಶನಿವಾರ ಸಂಜೆ ಬಂಧಿಸಲಾಯಿತು.
ನಿನ್ನೆ ರಾತ್ರಿ ನಡೆದ ಹಲ್ಲೆಯ ಬಗ್ಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರಿಗೆ ಚಾಲಕ ಫೋನ್ ಮೂಲಕ ವಿವರಿಸಿದ್ದ. ಈ ಬಗ್ಗೆ ಎಸ್.ಪಿ.ನಿಂಬರಗಿ ಅವರಿಗೆ ಮಾಹಿತಿ ನೀಡಲಾಗಿತ್ತು. ಅವರು ತುರ್ತಾಗಿ ಕ್ರಮ ಕೈಕೊಳ್ಳಲು ಅಥಣಿ ಡಿ ಎಸ್ ಪಿ ಗಿರೀಶ ಅವರಿಗೆ ಸೂಚಿಸಿದ್ದರು.
ಇಂದು ಶನಿವಾರ ಮಧ್ಯಾನ್ಹ ಸಂಕೇಶ್ವರ ತಲುಪಿದ್ದ ಚಾಲಕನನ್ನು ಮರಳಿ ಸಾತಾರಾಕ್ಕೆ ಪಿ ಎಸ್ ಐ ಒಬ್ಬರು ಕರೆದೊಯ್ದು ಪ್ರಕರಣ ದಾಖಲಿಸಿದ್ದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಪೋಲೀಸರಿಗೆ ಕನ್ನಡ ಕ್ರಿಯಾ ಸಮಿತಿ ಕೃತಜ್ಞತೆ ಸಲ್ಲಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ