Kannada NewsKarnataka News

ವಿಧಾನಸಭೆ ಚುನಾವಣೆ: ಜಿಲ್ಲೆಯಲ್ಲಿ ರೂ. 1.49 ಕೋಟಿ ನಗದು, ಮದ್ಯ, ಇತರೆ ವಸ್ತು ವಶ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೋವಾ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಸದ್ಯಕ್ಜೆ 24 ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಗೋವಾ ಗಡಿಭಾಗದಲ್ಲಿ 4 ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ 20 ಚೆಕ್ ಪೋಸ್ಟ್ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ನಲ್ಲಿ ನಗದು, ಮದ್ಯ ಸೇರಿದಂತೆ ಒಟ್ಟಾರೆ 1.49 ಕೋಟಿ ರೂಪಾಯಿ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ (ಮಾ.21) ನಡೆದ ಚುನಾವಣಾ ಪೂರ್ವಸಿದ್ಧತೆ ಕುರಿತ ವಿಡಿಯೋಸಂವಾದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಅನಧಿಕೃತ ಬ್ಯಾನರ್, ಪೋಸ್ಟರ್, ಗೋಡೆಬರಹಗಳನ್ನು ತೆರವುಗೊಳಿಸಬೇಕು ಎಂದು ಪಾಲಿಕೆಯ ಆಯುಕ್ತರಿಗೆ ತಿಳಿಸಿದರು.

ಅನಧಿಕೃತವಾಗಿ ಪೋಸ್ಟರ್, ಬ್ಯಾನರ್ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಒಂದು ವೇಳೆ ಸೂಚನೆ ಬಳಿಕವೂ ಅಂಟಿಸದರೆ ಅಂತಹವರಿಂದಲೇ ಅವುಗಳನ್ನು ತೆರವುಗೊಳಿಸುವ ಶುಲ್ಕ ವಸೂಲಿ ಮಾಡಬೇಕು ಎಂದು ಸೂಚನೆ ನೀಡಿದರು.

ಮಾದರಿ ನೀತಿಸಂಹಿತೆ ಜಾರಿಗೆ ಬಂದ ಬಳಿಕ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಅನುಮತಿಯನ್ನು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಏಕಗವಾಕ್ಷಿ ವ್ಯವಸ್ಥೆ ಮೂಲಕ ನೀಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಜತೆ ಸಮನ್ವಯ ಸಾಧಿಸಿ ಏಕ ಗವಾಕ್ಷಿ ವ್ಯವಸ್ಥೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button