ವಿಧಾನಸಭೆ ತಾತ್ಕಾಲಿಕ ಅಮಾನತು?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ರಾಜ್ಯದಲ್ಲಿ ಮೈತ್ರಿ ಸರಕಾರ ವಿಶ್ವಾಸ ಮತ ಕಳೆದುಕೊಂಡು 2 ದಿನಗಳಾಗಿವೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸಚಿವಸಂಪುಟ ಸಹೋದ್ಯೋಗಿಗಳ ಜೊತೆ ರಾಜಿನಾಮೆಯನ್ನೂ ಸಲ್ಲಿಸಿದ್ದಾರೆ. ಪರ್ಯಾಯ ವ್ಯವಸ್ಥೆಯಾಗುವವರೆಗೆ ಮುಂದುವರಿಯುವಂತೆ ರಾಜ್ಯಪಾಲರು ಕುಮಾರಸ್ವಾಮಿಗೆ ಸೂಚಿಸಿದ್ದಾರೆ.
ಆದರೆ ಭಾರತೀಯ ಜನತಾ ಪಾರ್ಟಿ ಈವರೆಗೂ ಸರಕಾರ ರಚಿಸುವ ಹಕ್ಕು ಮಂಡಿಸಿಲ್ಲ. ಹೈಕಮಾಂಡ್ ಆದೇಶಕ್ಕೆ ಯಡಿಯೂರಪ್ಪ ಕಾಯುತ್ತಿದ್ದಾರೆ. ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ನಿಯೋಗ ನವದೆಹಲಿಗೆ ತೆರಳಿದೆ.
ಹೈಕಮಾಂಡ್ ವಿಳಂಬ ನೀತಿ ಅನುಸರಿಸುತ್ತಿರುವುದೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಯಡಿಯೂರಪ್ಪ ಲೆಕ್ಕಾಚಾರ ಒಂದಿದ್ದರೆ ಹೈಕಮಾಂಡ್ ಲೆಕ್ಕಾಚಾರ ಬೇರೆ ಇದ್ದಂತಿದೆ. ಅತೃಪ್ತರ ನಡೆ, ಅತೃಪ್ತರ ಕುರಿತು ಸ್ಪೀಕರ್ ನಿರ್ಧಾರ, ಸುಪ್ರಿಂ ಕೋರ್ಟ್ ತೀರ್ಪು ಇವನ್ನೆಲ್ಲ ಕಾದು ನೋಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿರಬಹುದು.
ಯಾವುದೇ ಕಾರಣದಿಂದ ಆತುರಪಟ್ಟು ಸರಕಾರ ರಚಿಸಲು ಹೋಗಿ ಮುಖಭಂಗವಾಗದಂತೆ ನೋಡಿಕೊಳ್ಳಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಹಾಗಾಗಿಯೇ ಕಾದು ನೋಡುವ ತಂತ್ರ ಅನುಸರಿಸುತ್ತಿರಬಹುದು.
ರಾಜ್ಯಪಾಲರ ನಿರ್ಧಾರ ಏನು?
ಈಗ ಎಲ್ಲರ ಕಣ್ಣು ರಾಜಭವನದತ್ತ ನೆಟ್ಟಿದೆ. ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರ ಕುತೂಹಲ ಮೂಡಿಸಿದೆ. ಅವರು ಬಹಳ ದಿನ ಕಾಯಲು ಸಾಧ್ಯವಿಲ್ಲ. ತುರ್ತಾಗಿ ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಬೇಕಿದೆ. ಕುಮಾರಸ್ವಾಮಿ ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಪಡೆದು ರಾಜಿನಾಮೆ ನೀಡುವುದಾಗಿ ಇಟ್ಟಿದ್ದ ಪ್ರಸ್ತಾವನೆಗೆ ಬಿಜೆಪಿ ಒಪ್ಪಿರಲಿಲ್ಲ.
ಈಗ ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಸಿಗದಿದ್ದಲ್ಲಿ ಆಗಸ್ಟ್ 1ರಿಂದ ಯಾವುದೇ ಬಿಲ್ ಪಾಸ್ ಆಗಲು ಸಾಧ್ಯವಿಲ್ಲ. ಸರಕಾರಿ ನೌಕರರ ವೇತನ ಮಾಡುವುದಕ್ಕೂ ಆಗುವುದಿಲ್ಲ. ಹಾಗಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ರಾಜ್ಯಪಾಲರು ವಿಧಾನಸಭೆಯನ್ನು ತಾತ್ಕಾಲಿಕ ಅಮಾನತ್ತಿನಲ್ಲಿಟ್ಟು ರಾಷ್ಟ್ರ ಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಬಹುದು.
ಬಿಜೆಪಿ ಸರಕಾರ ರಚಿಸಲು ಹಕ್ಕು ಮಂಡಿಸಿದ ತಕ್ಷಣ ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡು ಬಿಜೆಪಿಗೆ ಸರಕಾರ ರಚಿಸಲು ಮತ್ತು ಬಹುಮತ ಸಾಭೀತುಪಡಿಸಲು ಸೂಚಿಸಬಹುದು.
ಈ ಎಲ್ಲ ಬೆಳವಣಿಗೆಗೆ ಮುನ್ನ ರಾಷ್ಟ್ರಪತಿಗಳು ಕೇಂದ್ರ ಗೃಹ ಇಲಾಖೆಯನ್ನು ಸಂಪರ್ಕಿಸಿ ಚರ್ಚಿಸುವ ಸಾಧ್ಯತೆ ಇಲ್ಲದಿಲ್ಲ. ಏಕೆಂದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಕೇಂದ್ರದ ಗೃಹ ಸಚಿವರೂ ಕೂಡ. ರಾಜ್ಯಪಾಲರು ತಮ್ಮ ಶಿಫಾರಸ್ಸನ್ನು ಕೇಂದ್ರ ಗೃಹ ಇಲಾಖೆಗೇ ಕಳಿಸಬೇಕಾಗುತ್ತದೆ.
ಇಂದು ಸಂಜೆಯೊಳಗೆ ಒಂದು ನಿರ್ಧಾರ ಪ್ರಕಟವಾಗಬಹುದು. ಸರಕಾರ ಬೀಳಿಸಲು ಆತುರ ತೋರಿದ ಬಿಜೆಪಿ ಸರಕಾರ ರಚಿಸಲು ವಿಳಂಬ ನೀತಿ ಅನುಸರಿಸುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ