
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಭೀತಿ ನಡುವೆಯೇ ವಿಧಾನಮಂಡಲ ಅಧಿವೇಶನದ ಎರಡನೇ ದಿನದ ಕಲಾಪ ಆರಂಭವಾಗಿದ್ದು, ಮಾಸ್ಕ್ ಧರಿಸದ ಸದಸ್ಯರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಸ್ಪೀಕರ್ ಕಾಗೇರಿ, ಕೊರೊನಾ ಸೋಂಕು ಸಾಂಕ್ರಾಮಿಕ ರೋಗ. ಹೀಗಾಗಿ ಎಲ್ಲರೂ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಆಡಳಿತ ಹಾಗೂ ವಿಪಕ್ಷ ಸದಸ್ಯರು ಅಧಿವೇಶನವನ್ನು ಹೆಚ್ಚು ಜವಾಬ್ದಾರಿಯುತವಾಗಿ ನಡೆಸಬೇಕಿದೆ. ಸದನದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂದು ಹೇಳಿದರು.
ಸರ್ಕಾರ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಂಡಿದ್ದರೂ ಕೂಡ ನಿನ್ನೆ ಸದನದಲ್ಲಿ ಕೆಲ ಸದಸ್ಯರು ಮಾಸ್ಕ್ ತೆಗೆದು ಕುಳಿತಿದ್ದರು. ಇಂದಿನಿಂದ ಎಲ್ಲರೂ ಸದನದಲ್ಲಿ ಮಾಸ್ಕ್ ಧರಿಸಲೇಬೇಕು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರು ಕೂಡ ನಿರ್ಲಕ್ಷ್ಯ ಮಾಡದೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಇನ್ನು ಇಂದಿನಿಂದ ಸದಸ್ಯರಿಗೆ ಕೊವಿಡ್ ನೆಗೆಟೀವ್ ಟ್ಯಾಗ್ ನೀಡಲಾಗುತ್ತದೆ. ಕೊವಿಡ್ ಇಲ್ಲದವರು ಈ ಟ್ಯಾಗ್ ಧರಿಸಬೇಕು ಎಂದು ಆಡಳಿತ ಹಾಗೂ ವಿಪಕ್ಷ ಸದಸ್ಯರಿಗೆ ಮನವಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ