
ಗಂಡನನ್ನು ಸೇರಿಸುತ್ತೇನೆಂದ ಡೋಂಗಿ ಜ್ಯೋತಿಷಿ ಬಂಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ದೂರಾದ ಪತಿಯ ಮನಸ್ಸನ್ನು ಬದಲಿಸುತ್ತೇನೆಂದು ಹೇಳಿ ಮಹಿಳೆಯಿಂದ 2.60 ಲಕ್ಷ ರೂ. ಪಡದ ಡೋಂಗಿ ಜ್ಯೋತಿಷಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ದಿನಪತ್ರಿಕೆಗಳಲ್ಲಿ ಬರುವ ಕರ ಪತ್ರದಲ್ಲಿ ಮುದ್ರಿತ ಜೋತಿಷ್ಯನ್ನು ನಂಬಿದ ಬೆಳಗಾವಿ ನಗರದ ಗೃಹಣಿಯೊಬ್ಬರು ಆ ಜೋತಿಷ್ಯಿಯ ಮುಂದೆ ತನ್ನ ನೋವು ತೋಡಿಕೊಂಡಿದ್ದರು. ತನ್ನ ಪತಿ ತನ್ನಿಂದ ದೂರಾದ ಬಗ್ಗೆ ತಿಳಿಸಿದ್ದರು.
ಇದನ್ನೇ ಬಂಡವಾಳವಾಗಿಸಿಕೊಂಡ ಜ್ಯೋತಿಷ್ಯಿ ತನ್ನನ್ನು ಶ್ರೀ ಸಾಯಿ ದುರ್ಗಾದೇವಿ ಜ್ಯೋತಿಷ್ಯಂ ಪಂಡಿತ ವ್ಹಿ.ಆರ್. ಗುರೂಜಿ ಸಾ. ಕೊಳ್ಳೇಗಾಲ, ಚಾಮರಾಜ ನಗರ ಜಿಲ್ಲೆ ಎಂದು ಸುಳ್ಳು ವಿವರ ನೀಡಿದ್ದ.
ಆ ಮಹಿಳೆಯಿಂದ ಪೂಜೆ ಇತ್ಯಾದಿಗಳಿಗಾಗಿ ಹಂತ ಹಂತವಾಗಿ ಸುಮಾರು2.60 ಲಕ್ಷ ರೂ ಹಣವನ್ನು ಫೋನ್ ಮುಖಾಂತರ ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಅವಳಿಗೆ ಸುಳ್ಳುಗಳನ್ನು ಹೇಳುತ್ತ ಮೋಸ ಮಾಡುತ್ತಿದ್ದ.
ಈ ಬಗ್ಗೆ ನೀಡಿದ ದೂರಿನನ್ವಯ ಆತನ ಬ್ಯಾಂಕ್ ಖಾತೆ ಹಾಗೂ ಕರಪತ್ರದ ಜಾಡು ಹಿಡಿದು ಬೆಳಗಾವಿ ಎಪಿಎಂಸಿ ಠಾಣೆಯ ಪೊಲೀಸರು ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ಡೋಂಗಿ ಜೋತಿಷ್ಯಿಯನ್ನು ಬಂಧಿಸಿದರು.
ವಿಚಾರಣೆ ನಡೆಸಿದಾಗ ಆತನ ಹೆಸರು ವಿಜಯಕುಮಾರ ತಂದೆ ರಾಮಣ್ಣಾ ಸುಗತೆ (೪೦ ವರ್ಷ) ಸಾ. ಹಟ್ಟಿ, ರಾಯಚೂರ ಜಿಲ್ಲೆ, ಹಾಲಿ ಸುಂಕದ ಕಟ್ಟೆ, ಬೆಂಗಳೂರು ಎಂದು ತಿಳಿದು ಬಂದಿದೆ., ಆತನಿಂದ 1.30 ಲಕ್ಷ ರೂ. ವಶಕ್ಕೆ ಪಡೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈತನನ್ನು ಬಂಧಿಸುವಲ್ಲಿ ಶ್ರಮಿಸಿದ ಎಸಿಪಿ ನಾರಾಯಣ ಬರಮನಿ, ಎಪಿಎಂಸಿ ಠಾಣೆಯ ಪಿಐ ಜೆ.ಎಂ ಕಾಲಿಮಿರ್ಚಿ ಹಾಗೂ ಸಿಬ್ಬಂದಿಯಾದ ಪ್ರಕಾಶ ಗಂಡವ್ವಗೋಳ ಮತ್ತು ನಾಗರಾಜ ಭೀಮಗೋಳ ಅವರ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.
ಬೆಳಗಾವಿ ನಗರದ ನಾಗರಿಕರು ಈ ರೀತಿಯ ಖೊಟ್ಟಿ ಕರಪತ್ರಗಳ ಬಗ್ಗೆ ಹಾಗೂ ಡೊಂಗಿ ಜ್ಯೋತಿಷ್ಯಗಳ ಬಗ್ಗೆ ಜಾಗೃಕತೆಯಿಂದ ಇರಲು ಹಾಗೂ ಯಾರಾದರೂ ಅಪರಿಚಿತರು ನೀಡುವ ಕರಪತ್ರಗಳನ್ನು ದಿನ ಪತ್ರಿಕೆಗಳಲ್ಲಿ ಸೇರಿಸಿ ಹಂಚದಂತೆ ಪತ್ರಿಕಾ ಏಜೆಂಟ್/ ಪೇಪರಬಾಯ್‌ಗಳಿಗೂ ಪೊಲೀಸರು ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ