ಪ್ರಗತಿವಾಹಿನಿ ಸುದ್ದಿ; ಅಥಣಿ: ಹೆಸ್ಕಾಂ ವ್ಯಾಪ್ತಿಯ ಅಥಣಿ ವಿಭಾಗದಲ್ಲಿ ಏಪ್ರಿಲ್ 2018 ರಿಂದ ಅಗಸ್ಟ್-2021 ರ ಅವಧಿಯಲ್ಲಿ ನಡೆದಿರುವ ಹಲವು ಯೋಜನೆಗಳ ಕಾಮಗಾರಿಗಳ ಅನುಷ್ಠಾನಗೊಳಿಸುವಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದ 86 ಕೋಟಿ ಅವ್ಯವಹಾರ ಆರೋಪದ ಮೇಲೆ 20 ನೌಕರರನ್ನು ಅಮಾನತು ಮಾಡಲಾಗಿದೆ.
ಈ ಸಂಬಂಧ ಅಥಣಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ,ಕೃಷ್ಣಾ ಸಕ್ಕರೆ ಕಾರ್ಖಾನೆ ಪ್ರತಿಭಟನೆ ಸಂದರ್ಭದಲ್ಲಿ ಪಿಕ್ಚರ್ ಅಭಿ ಬಾಕಿ ಹೇ ಅಂದಿದೀವಿ ಅದರ ಮುಂದುವರೆದ ಭಾಗವಾಗಿದೆ ಇದು. 20 ನೌಕರರ ಅಮಾನತು ಮಾಡಿರುವುದು ತಾಲೂಕು ರೈತ ಸಂಘಕ್ಕೆ ಸಿಕ್ಕ ಮೊದಲ ಗೆಲವು. ಇದು ನದಿಯಲ್ಲಿರುವ ಮೀನು ಹಿಡಿದಂತೆ ಇನ್ನು ಸಮುದ್ರದ ತಿಮಿಂಗಿಲಗಳು ಹಿಡಿಯಬೇಕಿದೆ ಎಂದರು.
ಈ ಭ್ರಷ್ಟಾಚಾರ ಬಯಲಿಗೆಳೆಯುವ ಸಲುವಾಗಿ ರೈತ ಸಂಘಟನೆಯು 3 ತಂಡಗಳನ್ನು ರಚಿಸಿ ಕಾರ್ಯಾಚರಣೆ ಮಾಡಿತ್ತು ಎಂದರು. ತಾಲೂಕಿನಲ್ಲಿಯ ಸರ್ಕಾರಿ ಕಛೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ರೈತ ಸಂಘಟನೆ ಹೋರಾಡಲು ನಿರ್ಧರಿಸಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷರಾದ ಚುನಪ್ಪಾ ಪೂಜಾರಿ ಮಾತನಾಡಿ ಹೆಸ್ಕಾಂ ಕಛೇರಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಸಾಕಷ್ಟು ಅಧಿಕಾರಿಗಳು, ಗುತ್ತಿಗೆದಾರರು ಭಾಗಿಯಾಗಿದ್ದಾರೆ ಇವರಿಂದ ನಷ್ಟ ಭರ್ತಿ ಮಾಡಿಕೊಳ್ಳಬೇಕೆಂದರು. ಹೆಸ್ಕಾಂನಂತೆ ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಚೆಸ್ಕಾಂ ನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಅವುಗಳು ಶೀಘ್ರದಲ್ಲೇ ಹೊರ ಬೀಳಲಿವೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡ ರಾಜಕುಮಾರ ಜಂಬಗಿ ಮಾತನಾಡಿ ಈ ಅಮಾನತು ಕೇವಲ ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ತಿಂದವರ ಮೇಲೆ ಪ್ರಯೋಗವಾದಂತೆ ಆಗಿದೆ. ಈ ಭ್ರಷ್ಟಾಚಾರ ಬಯಲಿಗೆಳೆಯಲು ಆರಟಿಐ ಅಡಿ ಮಾಹಿತಿ ಕೇಳಿದರು ನೀಡಿರಲಿಲ್ಲ ಅನಂತರ ಜಿಲ್ಲಾಧಿಕಾರಿ ಗಳಿಗೆ ಮನವಿ, ಕರ್ನಾಟಕ ವಿದ್ಯುತ್ ನಿಯಂತ್ರಣ ನಿಗಮಗಳಿಗೆ ಮನವಿ ಸಲ್ಲಿಸಲಾಯಿತು ಹಾಗೂ ಸ್ವಂತ ಖರ್ಚಿನಲ್ಲಿ ಹಳ್ಳಿಗಳಿಗೆ ತಿರುಗಾಡಿ ಸ್ಥಳ ವೀಕ್ಷಣೆ ಮಾಡಿ ಮಾಹಿತಿ ಕಲೆ ಹಾಕಲಾಗಿದೆ ಎಂದರು. ಈ ಭ್ರಷ್ಟಾಚಾರದಲ್ಲಿ ಭಾಗಿಯಾದವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಿಐಡಿ ಯಿಂದ ಹೆಚ್ಚಿನ ತನಿಖೆ ಮಾಡಬೇಕೆಂದು ಆಗ್ರಹ ಪಡಿಸಿದರು. ಮುಂದಿನ ದಿನಗಳಲ್ಲಿ ಹೆಸ್ಕಾಂ ಕ್ರಮ ಕೈಗೊಳ್ಳದಿದ್ದರೆ ಮುಖ್ಯ ಕಛೇರಿ ಮುತ್ತಿಗೆ ಹಾಕಲಾಗುವುದು ಎಂದರು. ಪಿಡಬ್ಲ್ಯೂಡಿ, ನೀರಾವರಿ ಇಲಾಖೆಯ ಸೇರಿದಂತೆ ಹಲವು ಇಲಾಖೆಯ ಲ್ಲಿ ಭ್ರಷ್ಟಾಚಾರಗಳು ನಡೆದಿವೆ ಅವುಗಳನ್ನು ಹೊರ ತಗೆಯಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಪ್ರಕಾಶ ಪೂಜಾರಿ, ಅಭಯಗೌಡ ಪಾಟೀಲ, ಸೋಮನಿಂಗ್ ಗುಡ್ಡಾಪೂರ್, ಗುರಪ್ಪ ಮಾದನ್ನವರ, ರಾಜು ಪೂಜಾರಿ, ಬಂಗಾರಪ್ಪ ಬೆಳಗಲಿ, ಅಣ್ಣಪ್ಪಾ ಹುದ್ದಾರ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಹಲವು ಸದಸ್ಯರು ಭಾಗಿಯಾಗಿದ್ದರು.
ಗ್ರಾಮ ಒನ್ ನಾಗರೀಕ ಸೇವಾಕೇಂದ್ರಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ