*ಎಂಎಲ್ಸಿ ರಾಜೇಂದ್ರ ಕೊಲೆಗೆ ಯತ್ನ: ಐವರ ವಿರುದ್ಧ ಎಫ್‌ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ : ಎಂಎಲ್‌ಸಿ ರಾಜೇಂದ್ರ ರಾಜಣ್ಣ ಅವರು ತಮ್ಮ ಕೊಲೆಗೆ ಸಂಚು ನಡೆದಿತ್ತು ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಇದೀಗ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಜೇಂದ್ರ ಅವರು ಇಂದು SP ಅಶೋಕ್ ಕೆ.ವಿ ಅವರಿಗೆ ಖುದ್ದು ಭೇಟಿಯಾಗಿ ತಮ್ಮ ಕೊಲೆಗೆ ಸಂಚು ನಡೆದಿತ್ತು ಎಂದು, ಈ ಬಗ್ಗೆ ಆಡಿಯೋವೊಂದನ್ನು ಉಲ್ಲೇಖಿಸಿ ಅಧಿಕೃತವಾಗಿ ದೂರನ್ನು ಸಲ್ಲಿಸಿದ್ದರು.
ಕೊಲೆಗೆ ಒಟ್ಟು ರೂ.70 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಾರೆ. ಅದರಲ್ಲಿ ರೂ.5 ಲಕ್ಷ ಕೊಟ್ಟಿದ್ದಾರೆ ಸೋಮ ಮತ್ತು ಭರತ್ ಎಂಬುವವರ ಹೆಸರು ಆಡಿಯೋದಲ್ಲಿ ಬಂದಿದೆ. ಅವರಿಬ್ಬರು ಯಾರು ಅಂತಾ ನನಗೆ ಗೊತ್ತಿಲ್ಲ. ಲೇಡಿ ಮತ್ತು ಹುಡುಗ ಮಾತನಾಡಿರೋ ಆಡಿಯೋ ಅದು. ಸುಮಾರು 18 ನಿಮಿಷದ ಆಡಿಯೋ ಇದೆ.
ರಾಜೇಂದ್ರ ಅವರ ಮಗಳ ಜನ್ಮದಿನವೇ ಹತ್ಯೆಗೆ ಪ್ಲಾನ್ ನಡೆದಿತ್ತು. ಆದ್ರೆ, ಸಮಯ ಸಂದರ್ಭಕಾರಣದಿಂದ ಕೃತ್ಯವೆಸಗಲಾಗಿರಲಿಲ್ಲ. ಮುಂದೊಂದು ದಿನ ಹತ್ಯೆ ಮಾಡಲು ಸಂಚು ರೂಪಿಸಿದ್ದರು.
ರಾಜೇಂದ್ರ ಹತ್ಯೆಗೆ ಹೊಸ ಕಾರು, ಶಸ್ತ್ರಾಸ್ತ್ರ ಖರೀದಿಸಿದ್ದರು. ಆರೋಪಿಗಳಾದ ಸೋಮ, ಭರತ, ಅಮಿತ್, ಗುಂಡ, ಯತೀಶ್ ಕೊಲೆಗೆ ಸಂಚು ರೂಪಿಸಿದ್ದು, ಮಧುಗಿರಿ, ತುಮಕೂರು, ಬೆಂಗಳೂರು, ಕಲಾಸಿಪಾಳ್ಯಗಳಲ್ಲಿ ಚಲನವಲನಗಳ ಬಗ್ಗೆ ಆಪ್ಲೇಟ್ ಮಾಡುತ್ತಿದ್ದ ಬಗ್ಗೆ ಎಫ್‌ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ತುಮಕೂರಿನ ಶಿರಾ ಗೇಟ್ ಶೆಡ್ನಲ್ಲಿ ಸ್ಕೆಚ್ ಹಾಕುತ್ತಿದ್ದರು. ಉನ್ನತಮಟ್ಟದ ರಾಜಕಾರಣಿಗಳ ಕೈವಾಡವಿರುವುದಾಗಿ ರಾಜೇಂದ್ರ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಹಾಗೇ ತಮಗೆ ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ದೂರು ನೀಡಿದ್ದ ನಿಮಿತ್ತ A-1 ಸೋಮ, A-2 ಭರತ್, A-3 ಅಮಿತ್, A-4 ಗುಂಡ, A-5 ಯತೀಶ್ ಎಂಬುವವರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.