ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗೋಧ್ರಾ ದುರಂತದ ರೀತಿ ಮತ್ತೆ ಅಪಾಯ ಸಂಭವಿಸುವ ಮಾಹಿತಿ ಇದೆ ಎಂಬ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಅಯೋಧ್ಯೆಗೆ ತೆರಳುವವರಿಗೆ ಸರ್ಕಾರ ರಕ್ಷಣೆ ನೀಡಬೇಕು. ಗೋದ್ರಾ ದುರಂತದ ರೀತಿ ಮತ್ತೆ ಅಪಾಯ ಸಂಭವಿಸುವ ಮಾಹಿತಿ ಇದೆ. ಹೀಗಾಗಿ ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ನೀಡಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರ ಉದ್ಘಟನಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮವಲ್ಲ, ರಾಜಕೀಯ ಕಾರ್ಯಕ್ರಮ. ಧಾರ್ಮಿಕ ಕಾರ್ಯಕ್ರಮವಾಗಿದ್ದರೆ ಧರ್ಮ ಗುರುಗಳು ಈ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಶಂಕರಾಚಾರ್ಯರು ಮೂಲ ಗುರುಗಳು. ಅವರ ರೀತಿ ಯಾವುದೇ ಧರ್ಮ ಗುರುಗಳು ಈ ಕಾರ್ಯಕ್ರಮ ಉದ್ಘಾಟಿಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮವಾಗುತ್ತಿತ್ತು ಎಂದಿದ್ದಾರೆ.
ಬಿ.ಕೆ.ಹರಿಪ್ರಸಾದ್ ನೀಡಿರುವ ಗೋಧ್ರಾ ರೀತಿ ದುರಂತ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಬಿ.ಕೆ.ಹರಿಪ್ರಸಾದ್ ನಂಬರ್ ಒನ್ ಭಯೋತ್ಪಾದಕ. ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೊದಲು ಬಿ.ಕೆ.ಹರಿಪ್ರಸಾದ್ ಅವರನ್ನು ಬಂಧಿಸಬೇಕು. ಜನರ ಭಾವನೆಗಳಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅವರು ಟೆರರಿಸ್ಟ್ ರೀತಿ ಕಾಣುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಶಾಸಕ ಅರವಿಂದ್ ಬೆಲ್ಲದ್, ಬಿ.ಕೆ.ಹರಿಪ್ರಸಾದ್ ಕರ್ನಾಟಕದ ಹಿಂದೂಗಳಿಗೆ ಹೆದರಿಸುತ್ತಿದ್ದಾರೆ. ಗೋಧ್ರಾ ದಂಗೆ ಅಂದ್ರೆ ಏನು? ಹಿಂದೂಗಳನ್ನು ಸುಡುತ್ತೀರಾ? ಹಿಂದೂಗಳಿಗೆ ಹೆದರಿಕೆ ಹಾಕುತ್ತೀದ್ದೀರಾ? ನಿಮಗೆ ಜವಾಬ್ದಾರಿ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ