*ಪ್ರಹ್ಲಾದ ಜೋಶಿ ಬದಲಿಸಲ್ಲ ವೀರಶೈವ ಸ್ವಾಮೀಜಿಗಳಿಗೆ ಬಿಎಸ್ ವೈ ಸ್ಪಷ್ಟ ಸಂದೇಶ*

ಪ್ರಗತಿವಾಹಿನಿ ಸುದ್ದಿ: ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಪ್ರಹ್ಲಾದ ಜೋಶಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವೀರಶೈವ-ಲಿಂಗಾಯತ ಸ್ವಾಮೀಜಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ವೈ, ಸಚಿವ ಪ್ರಹ್ಲಾದ ಜೋಶಿ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ತಪ್ಪು ಗ್ರಹಿಸಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಯಾವುದೇ ಕಾರಣಕ್ಕೂ ಜೋಶಿ ಅವರನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.5
ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದರ ಹಿಂದೆ ಪ್ರಹ್ಲಾದ ಜೋಶಿ ಅವರ ಪಾತ್ರವಿಲ್ಲ. ದಿಂಗಾಲೇಶ್ವರ ಸ್ವಾಮೀಜಿ ಅವರಲ್ಲಿ ತಪ್ಪು ಗ್ರಹಿಕೆಯಾಗಿದೆ. ಅವರೊಂದಿಗೆ ಖುದ್ದು ನಾನೇ ಮಾತನಾಡಿ ಮನವೊಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಿಎಸ್ ವೈ ಹೇಳಿದರು.
ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ 150ಕ್ಕೂ ಹೆಚ್ಚು ಶ್ರೀಗಳು ಜೋಶಿ ಅವರನ್ನು ಬದಲಿಸುವಂತೆ ಗಡುವು ನೀಡಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಎಲ್ಲಾ ಸ್ವಾಮೀಜಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಹೆಚ್ಚು ಅಂತರದಲ್ಲಿ ಜೋಶಿ ಗೆಲ್ತಾರೆ: ಪ್ರಹ್ಲಾದ ಜೋಶಿ ಅವರು ಪಕ್ಷದ ಹಿರಿಯ ನಾಯಕರು. ಸಂಸದರಾಗಿ, ಕೇಂದ್ರ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲಾ ಸ್ವಾಮೀಜಿಗಳು ಮತ್ತು ಜನಾಂಗದವರು ಬಿಜೆಪಿ ಪರ ಇದ್ದಾರೆ. ಹಾಗಾಗಿ ಜೋಶಿ ಅವರು ಹಿಂದಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಬಿಎಸ್ ವೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ್ ತೆಂಗಿನಕಾಯಿ ಮತ್ತಿತರರು ಮುಖಂಡರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ