
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾಜಿ ಸಿಎಂ ಮೊಮ್ಮಗಳ ಬದುಕಿನಲ್ಲಿ ಅಂಥದ್ದೇನಾಗಿತ್ತು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ.ಸೌಂದರ್ಯ (30) ಇಂದು ಬೆಳಿಗ್ಗೆ ಬೆಂಗಳೂರಿನ ವಸಂತ ನಗರದಲ್ಲಿರುವ ಫ್ಲ್ಯಾಟ್ ನಲ್ಲಿ ರೂಮಿನಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆಸಲ್ಲಿಸುತ್ತಿದ್ದ ಸೌಂದರ್ಯ 2018ರಲ್ಲಿ ಡಾ.ನೀರಜ್ ಜತೆ ವಿವಾಹವಾಗಿದ್ದರು. ಸೌಂದರ್ಯ-ನೀರಜ್ ದಂಪತಿಗೆ 9 ತಿಂಗಳ ಮಗು ಕೂಡ ಇತ್ತು. ಇದೀಗ ಇದ್ದಕ್ಕಿದ್ದಂತೆ ಸೌಂದರ್ಯ ನೇಣಿಗೆ ಶರಣಾಗಿರುವುದು ಮಾಜಿ ಸಿಎಂ ಕುಟುಂಬದಲ್ಲಿ ಆಘಾತಕ್ಕೆ ಕಾರಣವಾಗಿದೆ.
ಬಾಣಂತನ ಮುಗಿಸಿ ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನ ನಿವಾಸಕ್ಕೆ ಮಗುವಿನೊಂದಿಗೆ ಸೌಂದರ್ಯ ವಾಪಸ್ಸಾಗಿದ್ದರು. ಇಂದು ಬೆಳಿಗ್ಗೆ 8 ಗಂಟೆಗೆ ಪತಿ ನೀರಜ್ ಕೆಲಸಕ್ಕೆಂದು ಆಸ್ಪತ್ರೆಗೆ ತೆರಳಿದ್ದಾರೆ. ಬೆಳಿಗ್ಗೆ 10 ಗಂಟೆಯಾದರೂ ಸೌಂದರ್ಯ ತನ್ನ ರೂಮಿನ ಬಾಗಿಲು ತೆರೆಯದಿದ್ದಾಗ ಕೆಲಸದವರು ಬಾಗಿಲು ಬಡಿದಿದ್ದಾರೆ. ಆದರೂ ಬಾಗಿಲು ತೆರೆಯದಿದ್ದಾಗ ಪತಿ ನೀರಜ್ ಗೆ ತಿಳಿಸಿದ್ದಾರೆ. ಅಷ್ಟರಲ್ಲೇ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಕೆಲ ಮೂಲಗಳ ಪ್ರಕಾರ ಕೌಟುಂಬಿಕ ಕಲಹದಿಂದ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಡಾ.ಸೌಂದರ್ಯ ಮರಣೋತ್ತರ ಪರೀಕ್ಷೆ ನಡೆದಿದ್ದು, ತನಿಖೆಯಿಂದಷ್ಟೇ ಸತ್ಯಾಸತ್ಯೆ ತಿಳಿಯಬೇಕಿದೆ.
ಸೌಂದರ್ಯ ಮೃತದೆಹವನ್ನು ಅಬ್ಬಿಗೇರಿಯಲ್ಲಿರುವ ಪತಿ ಮನೆಗೆ ತರಲಾಗಿದೆ. ಅಲ್ಲಿಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ